ಮಂಗಳೂರಲ್ಲಿ ವರುಣಾರ್ಭಟ; ಮಳೆಗೆ 6 ಮಂದಿ ಬಲಿ

Public TV
2 Min Read

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ವರುಣಾರ್ಭಟ ಜೋರಾಗಿದೆ. ಭಾರೀ ಮಳೆ ಪರಿಣಾಮ ವಿವಿಧೆಡೆ ಆರು ಮಂದಿ ಬಲಿಯಾಗಿದ್ದಾರೆ.

ಮನೆ ಮೇಲೆ ಕುಸಿದ ಗುಡ್ಡ; ಮೂವರು ದುರ್ಮರಣ
ಮಂಗಳೂರು (Mangaluru Rains) ಹೊರವಲಯದ ದೇರಳಕಟ್ಟೆಯ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತವಾಗಿ ಮನೆ ಧರಶಾಹಿಯಾಗಿ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದರು. ದುರಂತದಲ್ಲಿ ಮೂವರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಕಾಂತಪ್ಪ ಪೂಜಾರಿ ಎಂಬವರ ಮನೆ ಸಂಪೂರ್ಣ ಕುಸಿತವಾಗಿದೆ. ನಸುಕಿನ 4:30ರ ಸುಮಾರಿಗೆ ಗುಡ್ಡ ಕುಸಿದಿದ್ದು, ಸೀತಾರಾಮ ಅವರು ಮನೆಯಿಂದ ಓಡಿ ಹೊರ ಬಂದಿದ್ದರು. ಮನೆಯೊಳಗೆ ಅವರ ತಂದೆ 65 ವರ್ಷದ ಕಾಂತಪ್ಪ ಪೂಜಾರಿ, ತಾಯಿ 60 ವರ್ಷದ ಪ್ರೇಮ, ಪತ್ನಿ 31 ವರ್ಷದ ಅಶ್ವಿನಿ ಮತ್ತು ಇಬ್ಬರು ಮಕ್ಕಳಾದ ಎರಡೂವರೆ ವರ್ಷದ ಆರ್ಯನ್ ಹಾಗೂ ಒಂದು ವರ್ಷದ ಮಗು ಆಯುಷ್ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯರು ಬಂದು ಕಾಂತಪ್ಪ ಪೂಜಾರಿಯವರನ್ನ ರಕ್ಷಿಸಿದ್ದು, ಅವರ ಕಾಲಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರೇಮ ಮಣ್ಣಿನಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಮಣ್ಣಿನಡಿಯಲ್ಲಿದ್ದ ಒಂದು ಮಗು ಸಾವನ್ನಪ್ಪಿದ್ದು, ಬಳಿಕ ತಾಯಿ ಹಾಗೂ ಒಂದು ಮಗುವನ್ನು ರಕ್ಷಣೆ ಮಾಡಲಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗ ಆ ಮಗುವೂ ಮೃತಪಟ್ಟಿರುವ ದುರಂತ ಘಟನೆ ನಡೆದಿದೆ. ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ಭಾರೀ ಮಳೆ – ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ

ವಿದ್ಯುತ್ ಶಾಕ್‌ಗೆ ಲೈನ್‌ಮನ್ ಬಲಿ
ಓಡಿನ್ಮಾಳ ಗ್ರಾಮದ ಕುಮ್ಮಂಜ ಎಂಬಲ್ಲಿ ಘಟನೆ ವಿದ್ಯುತ್ ಶಾಕ್‌ನಿಂದ ಲೈನ್‌ಮನ್ ವೀರೇಶ್ ಜೈನ್ (27) ಮೃತಪಟ್ಟಿದ್ದಾರೆ. ಕೆಂಜಿಲ ಮನೆ ನಿವಾಸಿ ಸುಕುಮಾರ್ ಜೈನ್ ಮತ್ತು ಪೂರ್ಣಿಮಾ ದಂಪತಿಯ ಎರಡನೇ ಮಗ ಇವರು. ಹೆಚ್‌ಡಿ ಲೈನ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಡದೋಣಿ ಮಗುಚಿ ಇಬ್ಬರು ನೀರುಪಾಲು
ಮಂಗಳೂರಿನಲ್ಲಿ ಮಳೆಯ ಜೊತೆ ಕಡಲಬ್ಬರ ಜೋರಾಗಿದೆ. ಪರಿಣಾಮ ನಾಡದೋಣಿ ಮಗುಚಿ ಇಬ್ಬರು ನೀರುಪಾಲಾಗಿರುವ ಘಟನೆ ತೋಟಬೆಂಗ್ರೆ ಅಳಿವೆ ಬಾಗಿಲು ಎಂಬಲ್ಲಿ ನಡೆದಿದೆ. ತೋಟಬೆಂಗ್ರೆ ನಿವಾಸಿಗಳಾದ ಯಶವಂತ, ಕಮಲಾಕ್ಷ ನೀರುಪಾಲಾದ ಮೀನುಗಾರರಾಗಿದ್ದಾರೆ. ನಾಡದೋಣಿಯ ಅವಶೇಷಗಳು ಕಡಲತೀರದಲ್ಲಿ ಬಂದು ಬಿದ್ದಿವೆ. ನೀರಿನಲ್ಲಿ ಕಣ್ಮರೆಯಾಗಿರುವ ಮೀನುಗಾರರಿಗೆ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ʻಮರಣ ಮಳೆʼಗೆ ಅಜ್ಜಿ, ಮೊಮ್ಮಕ್ಕಳು ಬಲಿ – 9 ಗಂಟೆಗಳ ಜೀವನ್ಮರಣ ಹೋರಾಟದ ನಂತ್ರ ಬದುಕುಳಿದ ತಾಯಿ!

Share This Article