ಕೊಪ್ಪಳ, ಬಳ್ಳಾರಿಯಲ್ಲಿ ಮಳೆಯಬ್ಬರ – ಗುರುವಾರದವರೆಗೂ ಮುಂಗಾರು ಮಳೆ ಸಾಧ್ಯತೆ

Public TV
2 Min Read

ಬೆಂಗಳೂರು: ಇಂದು ರಾಜ್ಯಾದ್ಯಂತ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ನಡುವೆ ಕೆಲ ಜಿಲ್ಲೆಗಳಲ್ಲಿ ದಸರಾ ಹಬ್ಬಕ್ಕೆ ವರುಣರಾಯ ಅಡ್ಡಪಡಿಸಿದ್ದಾನೆ.

ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಕುಕನೂರ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿದಾಡುತ್ತಿದೆ. ಇನ್ನು ಗಂಗಾವತಿ ಗುಡ್ಡಮ್ಮ ಕ್ಯಾಂಪ್‍ನಲ್ಲಿ ರೈತರು ಮಾರಾಟ ಮಾಡಲು ಹೂ, ಬಾಳೆ ಕಂಬ, ಕಬ್ಬು ತಂದಿದ್ದರು. ಆದರೆ ಜಿಟಿಜಿಟಿ ಮಳೆಯಾಗುತ್ತಿರುವ ಕಾರಣ ಇದನ್ನೆಲ್ಲಾ ಮಾರಾಟ ಮಾಡಲು ತೊಂದರೆಯಾಗುತ್ತಿದೆ.

ಜಿಟಿಜಿಟಿ ಮಳೆಯಲ್ಲಿಯೇ ನಿಂತು ವ್ಯಾಪಾರಸ್ಥರು ಹೂ, ಹಣ್ಣು ವ್ಯಾಪಾರ ಮಾರಾಟ ಮಾಡುತ್ತಿದ್ದರೂ ಜನರು ಮಾತ್ರ ಮಾರ್ಕೆಟ್‍ಗೆ ಬರುತ್ತಿಲ್ಲ. ಜನರು ಮಾರ್ಕೆಟ್‍ಗೆ ಬರದ ಕಾರಣ ಹಾಕಿದ ಬಂಡವಾಳವಾದ್ರೂ ಬರುತ್ತೋ ಇಲ್ಲವೋ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಬಾರಿ ಜಿನಿಗುಡುತ್ತಿದ್ದ ಮಾರ್ಕೆಟ್ ಈಗ ಜಿಟಿಜಿಟಿ ಮಳೆಯಿಂದ ಬಿಕೋ ಎನ್ನುತಿದೆ.

ಇತ್ತ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಂಡೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದ ಹೊಸಪೇಟೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹೊಸಪೇಟೆ ನಗರದಲ್ಲಿ ಕಳೆದ ಮೂರು ಗಂಟೆಯಿಂದ ಎಡೆ ಬಿಡದೆ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನರ ಜೀವನ ಅಸ್ತವ್ಯಸ್ತವಾಗಿದೆ. ನಗರದ ಜಂಬುನಾಥಹಳ್ಳಿ ಸುಡುಗಾಡು ಸಿದ್ದರ ಕಾಲೋನಿಯಲ್ಲಿ ಮನೆಗಳು, ಗುಡಿಸಲುಗಳು ಜಲಾವೃತವಾಗಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ.

ಹುಬ್ಬಳ್ಳಿ ಹಾಗೂ ಹಾವೇರಿ ಜಿಲ್ಲೆಯ ಗಡಿ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಬೆಣ್ಣಿ ಹಳ್ಳದ ನೀರಿನ ಹರಿವು ಹೆಚ್ಚಾಗಿದೆ. ಏಕಾಏಕಿ ಬೆಣ್ಣಿಹಳ್ಳದ ನೀರು ಏರಿದ್ದರಿಂದ ಯಮನೂರ, ತಡಹಾಳ, ಗುಡಿಸಾಗರ, ನವಲಗುಂದ ಭಾಗದ ರೈತರ ಜಮೀನಿಗೆ ನೀರು ನುಗ್ಗಿದೆ. ಭಾನುವಾರದಿಂದ ಹುಬ್ಬಳ್ಳಿ ಹಾಗೂ ಹಾವೇರಿ ಗಡಿ ಭಾಗದಲ್ಲಿ ಮಳೆ ಸುರಿಯುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದ್ವಾರಗಾನಹಳ್ಳಿಯಲ್ಲಿ ಮಳೆಗೆ ಮನೆಯ ಗೋಡೆ ನೆನೆದು ಬೆಳಗ್ಗಿನ ಜಾವ ನಸುಕಿನಲ್ಲಿ ಮನೆ ಕುಸಿದ ಪರಿಣಾಮ ವೃದ್ಧೆ ಮೃತಪಟ್ಟಿದ್ದಾರೆ. ಗ್ರಾಮದ 75 ವರ್ಷದ ಪುಟ್ಟ ನರಸಮ್ಮ ಮೃತ ವೃದ್ಧೆ. ಹಳೆಯ ಮನೆಯಲ್ಲಿ ಮಲಗಿದ್ದ ವೃದ್ಧೆಯ ಮೈಮೇಲೆ ಗೋಡೆ ಕುಸಿದು ತಲೆ ಹಾಗೂ ಕೈ ಕಾಲಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಪುಟ್ಟನರಸಮ್ಮ ಮೃತಪಟ್ಟಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ತಡರಾತ್ರಿ ಸುರಿದ ಧಾರಕಾರ ಮಳೆಗೆ ಜಕ್ಕಲಮಡುಗು ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *