ದೆಹಲಿಯಲ್ಲಿ ಮಳೆ ಆರ್ಭಟ; ಪ್ರಮುಖ ರಸ್ತೆಗಳು ಜಲಾವೃತ – ಸಂಚಾರ ಅಸ್ತವ್ಯಸ್ತ

Public TV
1 Min Read

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ನಗರದ ಪ್ರಮುಖ ಭಾಗಗಳು ಮಳೆ ನೀರಿನಿಂದ ಆವೃತವಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ದೆಹಲಿಯಲ್ಲಿ ಕಾರ್ಮೋಡ ಆವರಿಸಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯು ತೀವ್ರ ಶಾಖ ಮತ್ತು ಹೆಚ್ಚಿನ ಮಾಲಿನ್ಯ ಮಟ್ಟವನ್ನು ಇಳಿಸಿದೆ. ಇಂಡಿಯಾ ಗೇಟ್, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಡಿ ಹೌಸ್, ತುಘಲಕ್ ರಸ್ತೆ ಮತ್ತು ನಗರದ ಹಲವಾರು ಭಾಗಗಳು ನೀರಿನಿಂದ ಆವೃತವಾಗಿವೆ. ನೆರೆಯ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿಯೂ ಸಹ ಭಾರೀ ಮಳೆಯಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೆಹಲಿಗೆ ಆರೆಂಜ್‌ ಅಲರ್ಟ್‌ ಘೋಷಿಸಿತ್ತು. ಗುಡುಗು ಸಹಿತ ಮಧ್ಯಮ ಮಳೆ (ಗಂಟೆಗೆ 5-15 ಮಿಮೀ) ಮುನ್ಸೂಚನೆ ನೀಡಿತ್ತು. ಬೆಳಗ್ಗೆ ಮಳೆ ನೀರು ನಿಂತಿದ್ದರಿಂದ ವಿವಿಧ ಸ್ಥಳಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮಹಾಮಾಯ ಮೇಲ್ಸೇತುವೆಯ ಕೆಳಗಿರುವ ರಸ್ತೆ ಮತ್ತು ಅಂಬೇಡ್ಕರ್ ಪಾರ್ಕ್ ಬಳಿಯ ರಸ್ತೆ ಕೂಡ ಜಲಾವೃತವಾಗಿದೆ.

ದೆಹಲಿ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ ಇದ್ದು, ಜನತೆಗೆ ಆಹ್ಲಾದಕರ ಹವಾಮಾನದ ಅನುಭವ ಸಿಗುತ್ತಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ ಕೂಡ ಉತ್ತಮ ಸ್ಥಿತಿಯಲ್ಲಿದೆ. ಮಂಗಳವಾರ ದಕ್ಷಿಣ ದೆಹಲಿ, ಆಗ್ನೇಯ ದೆಹಲಿ, ಮಧ್ಯ ದೆಹಲಿ, ರಾಷ್ಟ್ರೀಯ ಹೆದ್ದಾರಿ 8, ದೆಹಲಿ-ಜೈಪುರ ಮಾರ್ಗ, ಐಟಿಒ ಮತ್ತು ಏಮ್ಸ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ನೀರು ನಿಂತ ಕಾರಣ ಸಂಚಾರ ಜಾಮ್ ಉಂಟಾಗಿತ್ತು.

ಜೂನ್ 29 ರಿಂದ ದೆಹಲಿಯ ಮುಂಗಾರು ಮಳೆಯು ಋತುಮಾನದ ಸರಾಸರಿಗಿಂತ 8% ಹೆಚ್ಚಾಗಿದೆ. ದೆಹಲಿಯಲ್ಲಿ ಇದುವರೆಗೆ 234.6 ಮಿಮೀ ಮಳೆಯಾಗಿದೆ ಎಂದು ಐಎಂಡಿ ದತ್ತಾಂಶವು ತಿಳಿಸಿದೆ.

Share This Article