-ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸಂಚಾರಕ್ಕಿಲ್ಲ ಅಡಚಣೆ
ಮಂಗಳೂರು: ದಕ್ಷಿಣ ಕನ್ನಡ (Dakshina Kannad) ಜಿಲ್ಲೆಯಲ್ಲಿ ಮಳೆ ಮುಂದುವರಿದ ಹಿನ್ನೆಲೆ ಕಡಬ ತಾಲೂಕಿನ ಮಣ್ಣಗುಂಡಿ ಬಳಿ ಭೂಕುಸಿತ ಉಂಟಾಗಿದ್ದು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.
ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಕಡಬ ತಾಲೂಕಿನ ಮಣ್ಣಗುಂಡಿ ಬಳಿ ಭೂಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ-75ರ ಮೇಲೆ ಎರಡು ಬದಿ ಮಣ್ಣು ಕುಸಿದಿದ್ದು, ಸಂಚಾರ ಬಂದ್ ಆಗಿದೆ. ಈ ಹಿನ್ನೆಲೆ ಮಂಗಳೂರಿನಿಂದ ಬೆಂಗಳೂರಿಗೆ ಸಾಗುವ ಲಾರಿ, ಬಸ್, ಟ್ರಕ್‌ಗಳ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಚರಿಸಲು ಯಾವುದೇ ಅಡಚಣೆ ಇಲ್ಲ, ಧರ್ಮಸ್ಥಳ ಕ್ರಾಸ್‌ನಿಂದ ಸ್ವಲ್ಪ ಮುಂದೆ ಕುಸಿತ ಉಂಟಾಗಿದೆ. ನೆಲ್ಯಾಡಿ ಬಳಿ ಎಡಕ್ಕೆ ಹೋಗಿ ಕೊಕ್ಕಡ ಮಾರ್ಗವಾಗಿ ರಾ.ಹೆ.75 ತಲುಪಬಹುದು ಎಂದು ಎಸ್‌ಪಿ ಡಾ.ಅರುಣ್ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಬೈಕ್‌ಗೆ ಡಿಕ್ಕಿಯಾಗಿ ಕಾಲುವೆಗೆ ಪಲ್ಟಿಯಾದ ಕಾರು – 7 ಮಂದಿ ದುರ್ಮರಣ
ಇನ್ನೂ ಮಂಗಳೂರಿನ ಕದ್ರಿ ಹಿಲ್ಸ್ನ ಸರ್ಕ್ಯೂಟ್ ಹೌಸ್ ಬಳಿಯ ರಸ್ತೆಗೆ ಬೃಹತ್ ಗುಡ್ಡ ಕುಸಿತವಾಗಿದ್ದು, ಭಾರೀ ಪ್ರಮಾಣದ ಕಲ್ಲು, ಮಣ್ಣು ರಸ್ತೆಗೆ ಬಿದ್ದಿದೆ. ವಾಹನ ಸಂಚಾರ ಇರುವ ಈ ರಸ್ತೆಗೆ ರಾತ್ರಿ ವೇಳೆ ಗುಡ್ಡ ಬಿದ್ದಿರೋದ್ರಿಂದ ಯಾವುದೇ ಅನಾಹುತಗಳಾಗಿಲ್ಲ. ಸದ್ಯ ರಸ್ತೆಗೆ ಬಿದ್ದಿರೋ ಕಲ್ಲು, ಮಣ್ಣುನ್ನು ಪಾಲಿಕೆ ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ.
ಮೇರಿಹಿಲ್‌ನ ಕೆನರಾ ವಿಕಾಸ ಕಾಲೇಜಿನ ಕಾಂಪೌಂಡ್ ಗೋಡೆ ಬುಧವಾರ ತಡರಾತ್ರಿ ಕುಸಿದು ಬಿದ್ದಿದ್ದು, ಕಾಂಪೌಂಡ್ ಪಕ್ಕ ನಿಲ್ಲಿಸಿದ್ದ 16 ಬೈಕ್ ಹಾಗೂ ಒಂದು ಇನೋವಾ ಕಾರ್ ಸಂಪೂರ್ಣವಾಗಿ ಹಾನಿಯಾಗಿದೆ. ಕಾಂಪೌಂಡ್ ಕುಸಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಅವಘಡ – 50 ಮಂದಿ ಸಾವು