ಭಾರೀ ಮಳೆಗೆ ಚಿಕ್ಕಬಳ್ಳಾಪುರ ಶ್ರೀನಿವಾಸ ಜಲಾಶಯ ಭರ್ತಿ

Public TV
1 Min Read

ಚಿಕ್ಕಬಳ್ಳಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ಭರ್ತಿಯಾಗಿದೆ.

ಜಕ್ಕಲಮಡುಗು ಜಲಾಶಯ ಕೋಡಿ ಹರಿದ ಬೆನ್ನಲ್ಲೇ, ಶುಕ್ರವಾರ ಶ್ರೀನಿವಾಸ ಜಲಾಶಯ ಕೋಡಿ ಹರಿಯಲು ಆರಂಭಿಸಿದ್ದು ಕೋಡಿ ಹರಿಯೋದನ್ನ ನೋಡಲು ಜನಸಾಗರವೇ ಜಲಾಶಯದತ್ತ ಭೇಟಿ ನೀಡುತ್ತಿದ್ದಾರೆ.

ಕೋಡಿ ಹರಿಯುತ್ತಿರುವ ಜಲಾಶಯದ ಕೆಳ ಭಾಗದಲ್ಲಿ ಮೀನು ಕ್ಯಾಚ್ ಹಿಡಿದುಕೊಳ್ಳೋಕೆ ಜನ ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ. ಕೋಡಿ ಹರಿಯುವ ನೀರಿನ ಜೊತೆ ಮೀನುಗಳು ಸಹ ಹರಿದುಬರುತ್ತಿದ್ದು ಕೈಗೆ ಸಿಗದ ಮೀನುಗಳಿಗಾಗಿ ಜನ ಒಂದಲ್ಲ ಒಂದು ರೀತಿಯ ಪಡಿಪಾಟಲು ಪಡ್ತಾ ಮೀನುಗಳನ್ನ ಸೆರೆ ಹಿಡಿದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಮೀನು ಸಿಕ್ಕವರಿಗೆ ಅಂತೂ ಖುಷಿಯೋ ಖುಷಿಯಾಗಿದೆ.

ಇನ್ನೂ ಚಿಂತಾಮಣಿ ತಾಲೂಕಿನಾದ್ಯಾಂತ ಕಳೆದ ರಾತ್ರಿ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿ ಚೊಕ್ಕಹಳ್ಳಿ, ಕಾಗತಿ ಗ್ರಾಮಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದೆ.

ಮತ್ತೊಂದೆಡೆ ಚಿಂತಾಮಣಿಯ ಕರಿಯಪ್ಪಲ್ಲಿ ಬಳಿಯ ಅಗ್ನಿಶಾಮಕ ದಳ ಕಚೇರಿಗೂ ಮಳೆಯ ನೀರು ನುಗ್ಗಿ ನಿಂತಿದ್ದ ಅಗ್ನಿಶಾಮಕ ದಳ ಲಾರಿ ಮಣ್ಣಿನಲ್ಲಿ ಕುಸಿದು ಹೋಗಿದೆ. ಇನ್ನೂ ಮುರಗಮಲ್ಲ ಹೊರ ಪೊಲೀಸ್ ಠಾಣೆಯ ಕಟ್ಟಡ ಕುಸಿದುಬಿದ್ದಿದೆ. ಮುರಗಮಲ್ಲ-ಚಿಂತಾಮಣಿ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ರಸ್ತೆ ಬದಿ ಮಣ್ಣಿನಲ್ಲಿ ಕುಸಿದಿದೆ.

 


Share This Article
Leave a Comment

Leave a Reply

Your email address will not be published. Required fields are marked *