ಮಳೆಯೂರಾದ ಬೆಂಗಳೂರು; ರಸ್ತೆಗಳಲ್ಲಿ ನದಿಯೋಪಾದಿ ಹರಿದ ನೀರು

Public TV
1 Min Read

– ಹತ್ತಾರು ಬಡಾವಣೆ ಜಲಾವೃತ; ರಸ್ತೆಗಿಳಿದ ಬೋಟ್‌ಗಳು

ಬೆಂಗಳೂರು: ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರು ಮಳೆಯೂರು ಆಗಿದೆ. ಹತ್ತಾರು ಬಡಾವಣೆಗಳು ಜಲಾವೃತವಾಗಿವೆ. ಸಿಲಿಕಾನ್ ಸಿಟಿಯಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

2000ಕ್ಕೂ ಹೆಚ್ಚು ಮಂದಿ ವಾಸವಿರುವ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಮತ್ತೆ ಜಲಮಯವಾಗಿದ್ದು, ಕಾರುಗಳು ಓಡಾಡಬೇಕಾದ ಜಾಗದಲ್ಲಿ ಬೋಟ್‌ಗಳು ಓಡಾಡುತ್ತಿವೆ. ರಸ್ತೆಗಳಲ್ಲಿ ನೀರು ಖಾಲಿಯಾಗದ ಸನ್ನಿವೇಶವಿದೆ. ರಸ್ತೆಗಳಂತೂ ಹಾಳುಗುಂಡಿಗಳಾಗಿ ಬದಲಾಗಿವೆ. ಬೆಂಗಳೂರು ಜನ ದಿಕ್ಕೆಟ್ಟಿದ್ದಾರೆ. ಸರ್ಕಾರದ ವಿರುದ್ಧ ವಿಪಕ್ಷಗಳ ಟೀಕೆ-ಆಕ್ರೋಶ-ಲೇವಡಿ ವ್ಯಕ್ತವಾಗಿದೆ. ಬೋಟ್ ಭಾಗ್ಯಕ್ಕೆ ಆಗ್ರಹಿಸಿದ್ದಾರೆ. ಆದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಎಲ್ಲರೂ ಕೆಲಸ ಮಾಡ್ತಿದ್ದಾರೆ. ನಾನು ಭೇಟಿ ಕೊಡೋದೇನು ದೊಡ್ಡ ವಿಚಾರವಲ್ಲ. ನನಗೆ ಪಬ್ಲಿಸಿಟಿ ಇಷ್ಟವಿಲ್ಲ ಎಂದಿದ್ದಾರೆ.

ಮೇಘಸ್ಫೋಟದಂತಹ ಮಳೆಗೆ ಬೆಂಗಳೂರು ಅಸ್ತವ್ಯಸ್ತವಾಗಿದೆ. ಕಳೆದ ರಾತ್ರಿ ಬೆಂಗಳೂರು ನಗರದಲ್ಲಿ 157, ಗ್ರಾಮೀಣ ಭಾಗದಲ್ಲಿ 176 ಮಿಲಿಮೀಟರ್ ಮಳೆ ಬಿದ್ದಿದೆ. ಇಂದು ದಿನವಿಡೀ ಬಿಟ್ಟುಬಿಡದೇ ಮಳೆಯಾಗಿದೆ. ಕೆರೆಗಳು, ರಾಜಕಾಲುವೆಗಳು ಉಕ್ಕಿ ಹರಿದು ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ಭಾಗಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ. ರಸ್ತೆಗಳಲ್ಲಿ ನದಿಯೋಪಾದಿಯಲ್ಲಿ ನೀರು ಹರಿದಿದೆ. ಕೆಲವೆಡೆ ಮೊಳಕಾಲುಮಟ್ಟದವರೆಗೆ ನೀರು ನಿಂತಿದೆ.

ಹತ್ತಾರು ಬಡಾವಣೆಗಳು ಜಲಾವೃತಗೊಂಡಿವೆ. ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮಳೆ ಸಂತ್ರಸ್ತರನ್ನು ರಕ್ಷಿಸಲು ಬೋಟ್‌ಗಳನ್ನು ಬಳಸಲಾಗ್ತಿದೆ. ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಅನ್ನು ಬಿಬಿಎಂಪಿ ಒಂದು ವಾರ ವಶಕ್ಕೆ ಪಡೆದಿದೆ. ಮಳೆ ಪರಿಸ್ಥಿತಿ ವೀಕ್ಷಿಸಲು ಭೇಟಿ ಕೊಟ್ಟ ಸ್ಥಳೀಯ ಶಾಸಕ ಕೃಷ್ಣಬೈರೇಗೌಡಗೆ ಜನರು ಕ್ಲಾಸ್ ತೆಗೆದುಕೊಂಡರು. ಎಲ್ಲೆಂದರಲ್ಲಿ ಮರಗಳು ಉರುಳ್ತಿವೆ. ಕಟ್ಟಡವೊಂದು ಉರುಳಿದೆ. ಭಾರೀ ಮಳೆ ಕಾರಣ ಕಳೆದ ರಾತ್ರಿ 20ಕ್ಕೂ ಹೆಚ್ಚು ವಿಮಾನಗಳ ಸೇವೆಗಳಲ್ಲಿ ವಿಳಂಬ ಉಂಟಾಗಿದೆ. ನಾಲ್ಕು ಇಂಡಿಗೋ ವಿಮಾನಗಳನ್ನು ಚೆನ್ನೈನಲ್ಲಿ ಲ್ಯಾಂಡ್ ಮಾಡಿಸಲಾಗಿದೆ. ಸದ್ಯಕ್ಕೆ ಮಳೆ ನಿಲ್ಲೋ ಲಕ್ಷಣ ಕಾಣುತ್ತಿಲ್ಲ. ಬುಧವಾರ ಕೂಡ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

Share This Article