ಬೆಂಗಳೂರು: ಸತತ ನಾಲ್ಕು ದಿನಗಳಿಂದ ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇಂದು ಸಂಜೆಯೂ ಮಳೆರಾಯನ ಆರ್ಭಟ ಮುಂದುವರಿದಿದೆ. ನಿನ್ನೆಯೇ ಹವಾಮಾನ ಇಲಾಖೆ ಬೆಂಗಳೂರಿನಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಿದ್ದು, 7 ಸೆ.ಮೀ. ನಿಂದ 11 ಸೆ.ಮೀ.ವರೆಗೂ ಮಳೆಯಾಗುವ ಮುನ್ಸೂಚನೆಯನ್ನು ನೀಡಿತ್ತು.
ನಗರದ ಮಲ್ಲೇಶ್ವರಂ, ಯಶವಂತಪುರ, ಗೊರಗುಂಟೆ ಪಾಳ್ಯ, ರಾಜಕುಮಾರ್ ಸಮಾಧಿ, ಸುಂಕದಕಟ್ಟೆ, ಬಿಇಎಲ್ ಸರ್ಕಲ್, ಕೆ.ಆರ್ ಸರ್ಕಲ್, ಕಾರ್ಪೋರೇಷನ್, ಶಿವಾನಂದ ಸರ್ಕಲ್, ರಾಜಭವನ ಸೇರಿದಂತೆ ನಗರದ ನಾಲ್ಕು ದಿಕ್ಕುಗಳಲ್ಲೂ ಉತ್ತಮ ಮಳೆಯಾಗಿದೆ.
ಸಂಜೆ ವೇಳೆಗೆ ಮಳೆ ಆರಂಭವಾದ ಕಾರಣ ವಾಹನ ಸವಾರರು ಪರದಾಟ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿತ್ತು. ತಗ್ಗು ಪ್ರದೇಶದ ರಸ್ತೆಗಳೆಲ್ಲ ಕೆರೆಗಳಂತೆ ಕಂಡು ಬಂತು. ಮಳೆಯಿಂದ ರಕ್ಷಣೆ ಪಡೆಯಲು ಬೈಕ್ ಸವಾರರು ಸೇತುವೆಗಳ ಕೆಳ ಭಾಗದಲ್ಲಿ ನಿಂತು ಆಶ್ರಯ ಪಡೆದಿದ್ದ ದೃಶ್ಯ ಸಾಮಾನ್ಯವಾಗಿತ್ತು.
3 ದಿನ ಮಳೆ: ತೆಲಂಗಾಣ, ಆಂಧ್ರ ಪ್ರದೇಶ ಮತ್ತು ರಾಜ್ಯದಲ್ಲಿ ಕಾಣಿಸಿಕೊಂಡಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ಮುಂದಿನ ಮೂರು ದಿನಗಳ ಮಳೆಯ ಅರ್ಭಟ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 3 ದಿನಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗುವ ಸೂಚನೆಯನ್ನು ಸದ್ಯ ಇಲಾಖೆ ನೀಡಿದೆ. ಕಳೆದ ನಾಲ್ಕು ದಿನದಿಂದ ಸಂಜೆಯಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವರುಣ ಅಬ್ಬರಿಸುತ್ತಿದ್ದು, ಈ ಹಿನ್ನೆಲೆ ಹವಾಮಾನ ಇಲಾಖೆ ಈಗಾಗಲೇ ಹಳದಿ ಅಲರ್ಟ್ ಘೋಷಣೆ ಮಾಡಿದೆ.