ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆಗೆ ಬೈಕ್ ಸವಾರ ಬಲಿ

Public TV
2 Min Read

ಬೆಂಗಳೂರು: ನಗರದಲ್ಲಿ ಸಂಜೆ ವೇಳೆಗೆ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳಿಗೆ ಕಾರಣವಾಗಿದ್ದು, ಹಲವಡೆ ಮಳೆ ನೀರು ಮನೆಗೆ ನುಗ್ಗಿದೆ. ಕೆಲವೆಡೆ ಮರಗಳು ನೆಲಕಚ್ಚಿವೆ. ನಗರದ ಲುಂಬಿಣಿ ಗಾರ್ಡನ್ ಬಳಿ ಬೈಕ್ ಸವಾರನ ಮೇಲೆ ಮರ ಬಿದ್ದ ಕಾರಣ ಸವಾರ ಸಾವನ್ನಪ್ಪಿದ್ದಾರೆ.

ಲುಂಬಿಣಿ ಗಾರ್ಡನ್ ಬಳಿಯ ರಸ್ತೆಯಲ್ಲಿ ಬೈಕ್ ಸವಾರ ಬರುತ್ತಿದ್ದ ವೇಳೆ ಅವಘಡ ನಡೆದಿದ್ದು, ಮಳೆ ಬಿದ್ದ ಕಾರಣ ರಸ್ತೆಯಲ್ಲಿ ಕಡಿಮೆ ವಾಹನ ಸಂಚಾರ ಇದ್ದ ಪರಿಣಾಮ ಆತನ ನೆರವಿಗೆ ಸಾರ್ವಜನಿಕರು ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಸದ್ಯ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ತೆರಳಿ ಬೈಕ್ ಸವಾರನನ್ನು ಆಸ್ಪತ್ರೆಗೆ ರವಾನಿಸಿದ್ದು, ಮರ ತೆರವು ಕಾರ್ಯ ನಡೆಸಲಾಗಿದೆ. ಸಾವನ್ನಪ್ಪಿದ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.

ನಗರದ ಬಾಣಸವಾಡಿ, ಹೆಣ್ಣೂರು, ಕೆಆರ್ ಪುರ, ಯಶವಂತಪುರ ಸೇರಿದಂತೆ ಹಲವಡೆ ಭಾರೀ ಮಳೆಯಾಗಿದ್ದು, ದಿಢೀರ್ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸಿದ್ದರು. ಅನೇಕಲ್ ಸೇರಿದಂತೆ ಹಲವೆಡೆ ಅಲಿಕಲ್ಲು ಮಳೆ ಕೂಡ ಆಗಿದ್ದು, ರಸ್ತೆಗಳಲ್ಲಿ ನೀರು ತುಂಬಿತ್ತು . ಚುನಾವಣೆ ಮತದಾನ ಇರುವ ಕಾರಣ ಬಸ್‍ಗಳ ಓಡಾಟ ಸಹ ಕಡಿಮೆ ಇದ್ದು ಸಾರ್ವಜನಿಕರು ಪರದಾಟ ನಡೆಸಿದ್ದಾರೆ.

ಬಾಣಸವಾಡಿ ಬಳಿಯ ತಗ್ಗು ಪ್ರದೇಶದಲ್ಲಿ ಹಲವು ಕಡೆ ಮನೆಗಳಲ್ಲಿ ನೀರು ನುಗ್ಗಿದ್ದು, ಆರ್ ಟಿ ನಗರ, ಸದಾಶಿವನಗರದಲ್ಲಿ ಮರ ಧರೆಗುರುಳಿದಿದೆ. ಕಾರಿನ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಕಾರಿನ ಗ್ಲಾಸ್‍ಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇತ್ತ ಲೋಕಸಭಾ ಮತದಾನ ನಾಳೆ ನಡೆಯುತ್ತಿರುವ ಕಾರಣ ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ತೆರಳುವ ಸಿದ್ಧತೆ ನಡೆಸಿದ್ದರು. ದಿಢೀರ್ ಮಳೆಯಿಂದ ಅವರು ಕೂಡ ಪರದಾಟ ನಡೆಸಿದ್ದರು. ಅಲ್ಲದೇ ಮತದಾನ ನಡೆಸಲು ತೆರಳುತ್ತಿದ್ದ ಹಲವರು ಕೂಡ ಸಮಸ್ಯೆಗೆ ಸಿಲುಕಿದ್ದರು.

ಮಳೆ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ನೈಸರ್ಗಿಕ ವಿಕೋಪದ ಕೇಂದ್ರದ ನಿರ್ದೇಶಕರಾದ ಶ್ರೀನಿವಾಸರೆಡ್ಡಿ ಅವರು, ಇಂದಿನ ಮಳೆಯನ್ನು ನಿರೀಕ್ಷೆ ಮಾಡಿ ಎಚ್ಚರಿಕೆ ನೀಡಲಾಗಿತ್ತು. ನಗರದ ಪೂರ್ವ ಭಾಗದಲ್ಲಿ ಇಂದು 55 ಎಂಎಂ ಮಳೆಯಾಗಿದೆ. ಮುಂಗಾರು ಪೂರ್ವ ಮಳೆ ಆಗಿರುವುದಿಂದ ಮಧ್ಯಾಹ್ನದ ಬಳಿಕವೇ ಮಳೆಯಾಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಮತದಾನ ನಡೆಯುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಮತದಾರರು ಮಧ್ಯಾಹ್ನದ ವೇಳೆಗೆ ಮತ ಚಲಾಯಿಸಿದರೆ ಉತ್ತಮ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *