ಕೆ.ಆರ್. ಸರ್ಕಲ್ ಅಂಡರ್ ಪಾಸ್‌ನಲ್ಲಿ ಮತ್ತೆ ಭೀತಿ – ಕೆಲ ನಿಮಿಷಗಳ ಅಂತರದಲ್ಲಿ ತಪ್ಪಿತು ಭಾರೀ ದುರಂತ

2 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ(Heavy Rain) ಕೆ.ಆರ್. ಸರ್ಕಲ್ ಅಂಡರ್ ಪಾಸ್ (K.R. Circle Underpass) ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಕಳೆದ ವರ್ಷ ಯುವತಿಯೊಬ್ಬರನ್ನು ಬಲಿ ಪಡೆದಿದ್ದ ಇದೇ ಅಂಡರ್ ಪಾಸ್ ನಿನ್ನೆ ಮತ್ತೆ ಅಪಾಯದ ಮಟ್ಟ ಮೀರಿ ತುಂಬಿ ಹರಿಯುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.

ನಿನ್ನೆ ಸಂಜೆ ಮಳೆ ಸುರಿಯಲು ಆರಂಭವಾದ ಕೆಲವೇ ನಿಮಿಷಗಳಲ್ಲಿ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಅಪಾಯದ ಮಟ್ಟವನ್ನು ತಲುಪಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಲವು ಕಾರುಗಳು ಅಂಡರ್ ಪಾಸ್ ದಾಟಿದ ಕೇವಲ 5 ನಿಮಿಷಗಳಲ್ಲೇ ಇಡೀ ಅಂಡರ್ ಪಾಸ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿತ್ತು.

ಒಂದು ವೇಳೆ ವಾಹನಗಳು ಸಂಚರಿಸುತ್ತಿರುವಾಗಲೇ ಈ ಮಟ್ಟಕ್ಕೆ ನೀರು ತುಂಬಿದ್ದರೆ ಕಳೆದ ಬಾರಿಯಂತೆ ವಾಹನಗಳು ಸಿಲುಕಿಕೊಂಡು ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆ ಇತ್ತು. ಆ ಮೂಲಕ ನಿನ್ನೆ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ. ಇದನ್ನೂ ಓದಿ: ರಕ್ಕಸ ಮಳೆಗೆ ಬೆಂಗಳೂರಿನಲ್ಲಿ 10 ಬಲಿ – ಅಮ್ಮನ ಮುಂದೆಯೇ ಪ್ರಾಣ ಬಿಟ್ಟ 17 ವರ್ಷದ ಮಗ

 

 

ಮರುಕಳಿಸಿದ ಭಾನುರೇಖಾ ದುರಂತದ ನೆನಪು:
ಕಳೆದ ವರ್ಷ ಇದೇ ಅಂಡರ್ ಪಾಸ್‌ನಲ್ಲಿ ಮಳೆ ನೀರು ತುಂಬಿ ಹರಿಯುವಾಗ ಸಿಲುಕಿಕೊಂಡಿದ್ದ ಕಾರಿನಲ್ಲಿದ್ದ ಯುವತಿ ಭಾನುರೇಖಾ ಮೃತಪಟ್ಟಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ನಿನ್ನೆಯ ಘಟನೆ ಆ ಕರಾಳ ನೆನಪನ್ನು ಮತ್ತೆ ಮರುಕಳಿಸುವಂತೆ ಮಾಡಿತು.

ಮಳೆಯ ತೀವ್ರತೆ ಎಷ್ಟಿತ್ತೆಂದರೆ ಅಂಡರ್ ಪಾಸ್ ಭರ್ತಿಯಾಗಿ ನೀರು ರಸ್ತೆಯ ಮೇಲೂ ಹರಿಯತೊಡಗಿತ್ತು. ಇದರಿಂದಾಗಿ ಸುತ್ತಮುತ್ತಲಿನ ರಸ್ತೆಗಳಲ್ಲೂ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಇದನ್ನೂ ಓದಿ: ಕಾಂಪೌಂಡ್ ಕುಸಿದು 7 ಜನರ ಸಾವಿನಿಂದ ಆಘಾತ: ಡಿಕೆಶಿ

 

ಸಾರ್ವಜನಿಕರ ಆಕ್ರೋಶ:
ಕಳೆದ ವರ್ಷ ದೊಡ್ಡ ದುರಂತ ಸಂಭವಿಸಿ ಯುವತಿ ಪ್ರಾಣ ಕಳೆದುಕೊಂಡಿದ್ದರೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ(GBA) ಅಧಿಕಾರಿಗಳು ಈ ಅಂಡರ್ ಪಾಸ್‌ನಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಎದುರಾಗುತ್ತಿದ್ದು, ಅಧಿಕಾರಿಗಳು ಕೇವಲ ತಾತ್ಕಾಲಿಕ ಕ್ರಮಗಳಿಗೆ ಸೀಮಿತವಾಗಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಮುಂದೆ ಮತ್ತೆ ಅನಾಹುತಗಳು ಸಂಭವಿಸುವುದು ಗ್ಯಾರಂಟಿ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Share This Article