ಬೆಂಗ್ಳೂರಿನಲ್ಲಿ ಭಾರೀ ಮಳೆ- ಸವಾರರ ಪರದಾಟ, ನೀರಲ್ಲಿ ಕೆಟ್ಟು ನಿಂತ ಬೈಕ್‌ಗಳು

Public TV
1 Min Read

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮಳೆ ಮುಂದುವರಿದಿದ್ದು, ಶನಿವಾರದಂತೆ ಇಂದು ಕೂಡ ಸಂಜೆಯ ವೇಳೆಗೆ ನಗರದ ಹಲವೆಡೆಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.

ನಗರದ ಎಂಜಿ ರೋಡ್, ಕಾರ್ಪೋರೇಷನ್, ಶಾಂತಿನಗರ, ರೇಸ್ ಕೋರ್ಸ್, ವಿಧಾನಸೌಧ ಮೆಜೆಸ್ಟಿಕ್, ಕೆ ಆರ್ ಸರ್ಕಲ್, ಕಾರ್ಪೊರೇಷನ್, ಕೆ ಆರ್ ಮಾರ್ಕೆಟ್, ಶ್ರೀರಾಮಮಂದಿರ, ಬಸವೇಶ್ವರನಗರ, ಶಿವನಗರ, ವಿಜಯನಗರ, ಶಾಂತಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಗಾಳಿಯೊಂದಿಗೆ ಭಾರೀ ಮಳೆಯ ಪರಿಣಾಮ ಸಂಜೆಯ ಹೊತ್ತಿಗೆ ಕೆಲಸ ಮುಗಿಸಿಕೊಂಡು ಹೋಗುತ್ತಿರುವವರಿಗೆ ಕಿರಿಕಿರಿ ಉಂಟುಮಾಡಿದೆ. ಮಳೆಯಿಂದಾಗಿ ವಾಹನ ಸವಾರರು ಅಂಡರ್ ಪಾಸ್, ಸ್ಕೈವಾಕ್, ಮೆಟ್ರೋ ನಿಲ್ದಾಣಗಳ ಕೆಳಗೆ ನಿಂತಿದ್ದಾರೆ.

ಭಾರೀ ಗಾಳಿಯಿಂದಾಗಿ ರಾಜಾಜಿನಗರ ಮಂಜುನಾಥನಗರದಲ್ಲಿ ಮರಗಳು ಧರಶಾಹಿಯಾಗಿವೆ. ಕೆ.ಆರ್ ಸರ್ಕಲ್ ರಸ್ತೆ ಕಂಪ್ಲೀಟ್ ಕೆರೆಯಂತಾದರೆ, ಬೈಕ್‌ಗಳಿ ನೀರಲ್ಲೇ ಕೆಟ್ಟು ನಿಂತಿವೆ. CID ರಸ್ತೆ ಕೆರೆಯಂತಾಗಿದೆ. ಒಟ್ಟಿನಲ್ಲಿ ಭಾರೀ ಮಳೆಯಿಂದಾಗಿ ನಗರದಲ್ಲಿ ಟ್ರಾಫಿಕ್‌ ಜಾಮ್‌ ಕೂಡ ಉಂಟಾಗಿದೆ. ಕೋರಮಂಗಲ, ಮಡಿವಾಳ, ವಿಲ್ಸನ್ ಗಾರ್ಡನ್, ಡೈರಿ ಸರ್ಕಲ್ ಸುತ್ತಮುತ್ತ ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ.

ಮುಂಗಾರು ಆರಂಭ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು 2 ದಿನ ಮಳೆಯ ಮುನ್ಸೂಚನೆ ನೀಡಿದೆ. ಶನಿವಾರವು ನಗರದ ಹಲವೆಡೆ ಭಾರೀ ಮಳೆಯಾಗಿತ್ತು. ಇದನ್ನೂ ಓದಿ: ಸಸಿಹಿತ್ಲು ಬೀಚ್‍ನಲ್ಲಿ ಕಡಲಬ್ಬರದ ಅಲೆಗಳ ಜೊತೆ ಸರ್ಫರ್‌ಗಳ ಕಾದಾಟ!

ರಾಜ್ಯದ ವಿವಿಧೆಡೆ ಮಳೆ ಆರ್ಭಟ: ರೇಷ್ಮೆನಾಡು ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ಭಾನುವಾರ ಮಳೆಯ ಆರ್ಭಟ ಮುಂದುವರಿದಿದೆ. ರಾಮನಗರದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ, ವಾಹನ ಸವಾರರು ತತ್ತರಿಸಿದ್ದಾರೆ. ಆದರೆ ವರುಣನ ಕೃಪೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಲ್ಲದೇ ಹಾಸನ, ಕೋಲಾರ ಜಿಲ್ಲೆಗಳಲ್ಲೂ ಭಾರೀ ಮಳೆ ಸುರಿದಿದೆ.

Share This Article