ಬೆಂಗಳೂರು ಸೇರಿ ದಕ್ಷಿಣದಲ್ಲಿ ಮಳೆ- ಮುಂದಿನ 3 ದಿನ ಮಳೆಯ ಮುನ್ಸೂಚನೆ

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಮುಂದಿನ 3 ದಿನ ಮಳೆ ಮುಂದುವರಿಯಲಿದೆ ಅಂತ ರಾಜ್ಯ ಹವಾಮಾನ ಇಲಾಖೆ (Weather Department) ಮಾಹಿತಿ ನೀಡಿದೆ. ಮೇ 12 ನಂತರ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸಂಜೆ ಹೊತ್ತಿಗೆ ಜೋರು ಮಳೆಯಾಯ್ತು. ವಾಹನ ಸವಾರರಿಗೆ ತೊಂದರೆ ಆಯ್ತು. ಬೆಂಗಳೂರಿನಲ್ಲಿ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಪಾಟರಿ ಟೌನ್ ಬಳಿಯ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ 12 ಅಡಿ ಉದ್ದಕ್ಕೂ ಹೆಚ್ಚು ಆಳ ರಸ್ತೆ ಕುಸಿದಿದೆ. ಸುರಂಗ ಮಾರ್ಗದಲ್ಲಿ ಮೆಟ್ರೋ ಸ್ಟೇಷನ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಜಾಗ ಪಕ್ಕದಲ್ಲಿಯೇ ರಸ್ತೆ ಭೂಕುಸಿತವಾಗಿದೆ. ಪರಿಣಾಮ ಕಾಮಗಾರಿ ನಡೆಯುವ ಸುತ್ತಮುತ್ತಲು ಏರಿಯಾದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ವಿಷಯ ತಿಳಿಯುತ್ತಿದ್ದಂತೆ ಮೆಟ್ರೋ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮಂಗಳವಾರ ರಾತ್ರಿ ಬೆಂಗಳೂರಿನ ಸಿವಿ ರಾಮನ್ ನಗರದ ನಾಗವಾರಪಾಳ್ಯದ 2ನೇ ಕ್ರಾಸ್‍ನಲ್ಲಿ ಮರದ ಕೊಂಬೆ ಬಿದ್ದು ಟೆಕ್ಕಿಯ ಬೆನ್ನು ಮೂಳೆ ಮುರಿದಿದೆ. 26 ವರ್ಷದ ರವಿಕುಮಾರ್ ಎಚ್‍ಎಎಲ್‍ನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ಮಧ್ಯರಾತ್ರಿ 3 ಗಂಟೆಯಿಂದ ಕೆಜಿಎಫ್, ಬಂಗಾರಪೇಟೆ, ಮಾಲೂರು ತಾಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿವೆ.

ಕೆಜಿಎಫ್‍ನ ಅಂಬೇಡ್ಕರ್ ನಗರ, ರಾಬರ್ಟ್‍ಸನ್ ಪೇಟೆಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಚಾಮರಾಜನಗರದ ಹನೂರು ತಾಲೂಕಿನ ಹಲವೆಡೆ ಮಳೆಯಾಗಿದೆ. ಮಂಡ್ಯ, ಮಡಿಕೇರಿ ಮಳೆ ಸುರಿದಿದೆ. ತಿಪಟೂರಿನ ನೊಣವಿನಕೆರೆಯ ಆಲ್ಬೂರು ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಲಾಗಿದೆ.

Share This Article