ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ- ಸವಾರರ ಪರದಾಟ, ಧರೆಗುರುಳಿದ ಮರಗಳು

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ಮೂರು ದಿನಗಳಿಂದ ಪ್ರಾರಂಭವಾದ ವರುಣನ ಆರ್ಭಟವು ಇಂದು ಸಹ ಮುಂದುವರಿದಿದ್ದು, ಮೆಜೆಸ್ಟಿಕ್, ಓಕಳಿಪುರಂ, ಮಾಗಡಿ ರೋಡ್, ಯಶವಂತಪುರ ಸೇರಿದಂತೆ ವಿವಿಧ ಕಡೆ ಭಾರೀ ಮಳೆಯಾಗಿದೆ.

ಎಲ್ಲೆಲ್ಲಿ ಏನಾಗಿದೆ?
ಮಳೆಯಿಂದಾಗಿ ಓಕಳಿಪುರಂ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಲ್ಲೇಶ್ವರಂ ಹಾಗೂ ರಾಜಾಜಿನಗರದ ಕೆಲವು ಕಡೆಗಳಲ್ಲಿ ಮಳೆಯ ಅಬ್ಬರಕ್ಕೆ ಮರಗಳು ಧರೆಗುರುಳಿವೆ. ರಾಜಾಜಿನಗರದ ಪ್ರಸನ್ನ ಚಿತ್ರಮಂದಿರದ ಮುಂಭಾಗದಲ್ಲಿ ನಿಂತಿದ್ದ ಆಟೋ ಮೇಲೆ ಮರ ಬಿದ್ದ ಪರಿಣಾಮ ಸಂಪೂರ್ಣವಾಗಿ ಜಖಂಗೊಂಡಿದೆ.

ಮಲ್ಲೇಶ್ವರಂ 8ನೇ ಕ್ರಾಸ್‍ನಲ್ಲಿ ಬೃಹತ್ ಮರವೊಂದು 1 ಆಟೋ, 2 ಕಾರು ಹಾಗೂ ಬೇಕ್ ಸೇರಿದಂತೆ 12 ವಾಹಗಳ ಮೇಲೆ ಬಿದ್ದಿದ್ದು, ಸಂಪೂರ್ಣವಾಗಿ ಜಖಂಗೊಂಡಿವೆ. ಆಟೋ ಚಾಲಕನಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಆದರೆ ಸುದರ್ಶನ್ ಸಿಲ್ಕ್ ಹೌಸ್‍ನ ಇಬ್ಬರು ಸಿಬ್ಬಂದಿಯ ತಲೆಯ ಮೇಲೆ ಮರ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಂದಿರಾನಗರದಲ್ಲಿ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದಿದ್ದರಿಂದ ಕಾರು ಜಖಂಗೊಂಡಿದೆ. ಇಲ್ಲಿನ ಹೊಯ್ಸಳ ನಗರದಲ್ಲಿ ತೆಂಗಿನಮರ, ವಿದ್ಯುತ್ ಕಂಬ ಹಾಗೂ ಕಾರಿನ ಮೇಲೆ ಬಿದ್ದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪಾಲಿಕೆ ಸದಸ್ಯ ಆನಂದ್ ಕುಮಾರ್, ಬಿಬಿಎಂಪಿ ಸಿಬ್ಬಂದಿಯಿಂದ ತೆರವು ಕಾರ್ಯಾಚರಣೆ ಆರಂಭಿಸಿದರು. ಬಳಿಕ ಸ್ಥಳೀಯರೊಂದಿಗೆ ಮಾತನಾಡಿ, ತಕ್ಷಣವೇ ವಿದ್ಯುತ್ ಕಂಬ ದುರಸ್ತಿ ಕಾರ್ಯ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *