ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ನಗರ ಹೊರವಲಯದ ಪ್ರದೇಶದಲ್ಲಿ ವರುಣಾನ ಅಬ್ಬರ ಹೆಚ್ಚಾಗಿದ್ದು, ಭಾರೀ ಮಳೆಗೆ ಹಲವೆಡೆ ಬೃಹತ್ ಮರಗಳು ಧರೆಗುರುಳಿದೆ.
ನಗರದ ನಾಗವಾರ, ಹೆಬ್ಬಾಳ, ಹೆಣ್ಣೂರು, ಥಣಿಸಂದ್ರ, ಮಾನ್ಯತಾ ಟೆಕ್ ಪಾರ್ಕ್, ವಿದ್ಯಾಸಾಗರ, ಕೆಜಿ ಹಳ್ಳಿ, ಕಮ್ಮನಹಳ್ಳಿ, ಯಲಹಂಕ, ಜಕ್ಕೂರು ಭಾಗದಲ್ಲಿ ಮಧ್ಯಾಹ್ನದ ವೇಳೆಗೆ ಮಳೆ ಅಬ್ಬರಿಸಿದೆ. ಸುಮಾರು 30 ನಿಮಿಷಗಳ ಕಾಲ ಈ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ. ಭಾರೀ ಮಳೆಯ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಬಿಸಿ ಹೆಚ್ಚಾಗಿತ್ತು.
ಮಳೆಗೆ ಜಯನಗರ, ನಿಮ್ಹಾನ್ಸ್ ಹಾಗೂ ನಾಗವಾರದಲ್ಲಿ ಮರಗಳು ಧರೆಗೆ ಉರುಳಿದ್ದು, ಜಯನಗರದಲ್ಲಿ ಕಾರಿನ ಮೇಲೆ ಬೃಹತ್ ಮರ ಬಿದ್ದಿತ್ತು. ಆದರೆ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನೆಲಮಂಗಲದಲ್ಲೂ ಮಳೆಯಾಗಿದ್ದು, ಪಟ್ಟಣದ ಗಣೇಶ್ ರಾವ್ ಅವರ ಮನೆ ಮೇಲೆ ಬೃಹತ್ ಮರವೊಂದು ಉಳಿಬಿದ್ದಿದೆ. ನಗರದ ಹಲವಡೆ ವಿದ್ಯುತ್ ಲೈನ್ ಹಾಗೂ ಕಂಬದ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ನೆಲಮಂಗಲ ತಹಶಿಲ್ದಾರ್ ಕೆ.ಎನ್ ರಾಜಶೇಖರ್ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಹಾಜಿಪಾಳ್ಯ ಗ್ರಾಮದಲ್ಲಿ ಬಿರುಗಾಳಿಗೆ ಉಮೇಶ್ ಎಂಬುವರ ಮನೆಯ ಮೇಲ್ಛಾವಣಿಯ ಶೀಟ್ ಗಳು ಸಂಪೂರ್ಣ ಹಾರಿಹೋಗಿದ್ದು, ಸುಮಾರು 5 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂಬ ಮಾಹಿತಿ ಲಭಿಸಿದೆ. ಉಳಿದಂತೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ರಾಮನಗರ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.
Heavy downpour near Basavanagudi #BengaluruRains @BngWeather pic.twitter.com/xLuxRm9UGD
— guru (@thegurniverse) May 17, 2019