ಮಲೆನಾಡಲ್ಲಿ ಮಳೆಯ ಅಬ್ಬರ – 20 ಕಂಬ, 50 ಮರ ಧರೆಗೆ

Public TV
1 Min Read

– ಮುರಿದು ಬಿದ್ದ ನೂರಾರು ವರ್ಷದ ಬೃಹತ್ ಮರ
– ಭಾನುವಾರವಾಗಿದ್ದರಿಂದ ತಪ್ಪಿದ ಭಾರೀ ಅನಾಹುತ

ಚಿಕ್ಕಮಗಳೂರು: ಕಳೆದ ದಿನ ಅನೇಕ ಕಡೆ ಬಿರುಗಾಳಿ ಸಹಿತ ಜೋರಾಗಿ ಮಳೆಯಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೂಡ ಮಳೆಯ ಅಬ್ಬರ ಮುಂದುವರಿದಿದ್ದು, ಕೊಪ್ಪ, ಎನ್‍ಆರ್ ಪುರ, ಶೃಂಗೇರಿಯಲ್ಲಿ ಭಾರೀ ಗಾಳಿಯೊಂದಿಗೆ ವರುಣ ದೇವ ಅಬ್ಬರಿಸಿದ್ದಾನೆ.

ಭಾನುವಾರ ರಾತ್ರಿ ಮೂಡಿಗೆರೆ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ಕೊಪ್ಪದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಕೊಪ್ಪ ಅಕ್ಷರಶಃ ನಲುಗಿ ಹೋಗಿದೆ. ಕೊಪ್ಪದಲ್ಲಿ ಮಳೆ ಜೊತೆ ಬೀಸಿದ ರಣಗಾಳಿಗೆ ಸುಮಾರು 50ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಅಲ್ಲದೇ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದಿವೆ. ಭಾರೀ ಗಾಳಿ ಮಳೆಗೆ ಮರ ಹಾಗೂ ವಿದ್ಯುತ್ ಕಂಬ ಮುರಿದು ಬಿದ್ದಿದ್ರಿಂದ ಕೊಪ್ಪ ನಗರ ಸಂಪೂರ್ಣ ಕತ್ತಲಲ್ಲಿದೆ.

ಬಿದ್ದ ಮರಗಳು ಮನೆ ಮೇಲೆ ಬಿದ್ದಿದ್ರಿಂದ ಮನೆಯ ಹಂಚುಗಳು, ಛಾವಣಿ ಮುರಿದು, ಮಳೆ ನೀರು ಮನೆಯೊಳಗೆ ನುಗ್ಗಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ಬೈಕ್‍ಗಳು ಕೂಡ ಸಂಪೂರ್ಣ ಜಖಂ ಆಗಿವೆ. ಇನ್ನೂ ಎನ್‍ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಇಟ್ಟಿಗೆ ಶಿವಪುರದ ಬಳಿ ನೂರಾರು ವರ್ಷದ ಬೃಹತ್ ಮರವೊಂದು ಮುರಿದು ಬಿದ್ದಿದೆ. ಪಕ್ಕದಲ್ಲೇ ಗ್ಯಾರೇಜ್ ಕೂಡ ಇತ್ತು. ಭಾನುವಾರವಾದ್ದರಿಂದ ಗ್ಯಾರೇಜ್‍ನಲ್ಲಿ ಯಾರೂ ಇರಲಿಲ್ಲ. ಬೇರೆ ದಿನವಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

ಈ ಮರದ ರೆಂಬೆ-ಕೊಂಬೆಗಳು ಒಣಗಿದ್ದು, ಬೀಳುವ ಹಂತದಲ್ಲಿದೆ ಎಂದು ಸ್ಥಳಿಯರು 2015ರಲ್ಲೇ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ. ಇಂದು ಭಾರೀ ಮಳೆ-ಗಾಳಿಗೆ ಮರವೇ ಉರುಳಿ ಬಿದ್ದಿದೆ. ಕಳೆದ 15 ದಿನಗಳಿಂದ ಬಿಟ್ಟುಬಿಟ್ಟು ಸುರಿಯುತ್ತಿರೋ ಮಳೆ ಕಂಡ ಮಲೆನಾಡಿಗರು ಈ ವರ್ಷವೂ ನಾವು ವರುಣನ ಅಬ್ಬರಕ್ಕೆ ಬಲಿಯಾಗುತ್ತೀವಾ ಎಂದು ಆತಂಕಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *