ಉಡುಪಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಕುಂದಾಪುರ, ಕಾರ್ಕಳ ಹೆಬ್ರಿಯಲ್ಲಿ ಕಳೆದ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದೆ.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ವಿಪರೀತ ಮಳೆ ಬೀಳುತ್ತಿದೆ. ಉಡುಪಿ ನಗರದಲ್ಲೂ ಮುಂಜಾನೆಯಿಂದ ಬಿರುಸಿನ ಮಳೆ ಬೀಳುತ್ತಿದೆ. ಮೂಡನಿಡಂಬೂರು ಎಂಬಲ್ಲಿ ಕೋಟಿ ಚೆನ್ನಯ ಗರಡಿಗೆ ನೆರೆ ನೀರು ನುಗ್ಗಿದೆ.
ಗರಡಿ ಭೇಟಿಗೆ ಜನ ಹೋಗದಂತಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 111 ಮಿಲಿಮೀಟರ್ ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 118, ಕುಂದಾಪುರ 87 ಮತ್ತು ಕಾರ್ಕಳದಲ್ಲಿ 141 ಮಿಲಿಮೀಟರ್ ಮಳೆ ಬಿದ್ದಿದೆ.
ಬನ್ನಂಜೆ ವ್ಯಾಪ್ತಿಯ ಹತ್ತಾರು ಮನೆಗಳಿಗೆ ಜಲದಿಗ್ಭಂಧನವಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಶನಿವಾರ 205 ಮಿಲಿಮೀಟರ್ ಮಳೆಯಾಗಲಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು ಮಳೆ ಮುಂದುವರಿಯುವ ಸಾಧ್ಯತೆಯಿದೆ.