ಬೆಂಗ್ಳೂರಲ್ಲಿ ಗುಡುಗು ಸಹಿತ ಭಾರೀ ಮಳೆ- ಇನ್ನೆರಡು ದಿನ ಮಳೆಯಾಗುವ ಮುನ್ಸೂಚನೆ

Public TV
2 Min Read

– ವರ್ಷದ ಮೊದಲ ಮಳೆಗೆ ಸಂಚಾರ ಅಸ್ತವ್ಯಸ್ತ

ಬೆಂಗಳೂರು: ಬೆಂಗಳೂರಿಗೆ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಆದ್ರೆ ಕೊಂಚ ಜೋರಾಗಿಯೇ ಅವಾಂತರ ಸೃಷ್ಠಿಸಿದೆ. ಇನ್ನೆರಡು ದಿನ ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮೊದಲ ಮಳೆಯಿಂದಾಗಿ ಇಷ್ಟು ದಿನ ಬಿಸಿಲಿನ ತಾಪಕ್ಕೆ ಹಾಟ್ ಸಿಟಿಯಾಗಿದ್ದ ರಾಜಧಾನಿ ಇದೀಗ ಕೂಲ್ ಆಗಿದೆ. ಆದ್ರೆ ಅಕಾಲಿಕವಾಗಿ ಸುರಿದ ಮಳೆ ಅವಾಂತರವನ್ನು ಕೂಡ ಸೃಷ್ಠಿ ಮಾಡಿದೆ. ಬೆಂಗಳೂರು ದಕ್ಷಿಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು ಜನ ಜೀವನ ಕೊಂಚ ಮಟ್ಟಿಗೆ ಅಸ್ತವ್ಯಸ್ತವಾಗಿತ್ತು. ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.


ಕಾರ್ಪೊರೇಷನ್, ಬನಶಂಕರಿ, ಬಸವನಗುಡಿ, ಮೆಜೆಸ್ಟಿಕ್, ಓಕಳಿಪುರಂ, ಗಾಂಧಿನಗರ, ಕೋರಮಂಗಲ, ಬೊಮ್ಮನಹಳ್ಳಿ, ಜಯನಗರ, ಫ್ರೇಜರ್‍ಟೌನ್, ಟೌನ್‍ಹಾಲ್, ಲಾಲ್‍ಬಾಗ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಯ್ತು. 2011ರ ಫೆಬ್ರವರಿಯಲ್ಲಿ 44 ಮಿಲಿಮೀಟರ್ ಮಳೆಯಾಗಿತ್ತು. ಆದ್ರೆ ಅದು ಒಂದು ತಿಂಗಳ ಲೆಕ್ಕಾಚಾರವಾಗಿದ್ದು. ನಿನ್ನೆ ಒಂದೇ ದಿನ 58 ಮಿಲಿಮೀಟರ್ ಮಳೆಯಾಗಿದ್ದು, ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ.

ಗುಡುಗು ಸಹಿತ ಸುರಿದ ಮಳೆಗೆ ನಗರದ ಒಟ್ಟು ಏಳು ಕಡೆ ಮರಗಳು ಧರೆಗೆ ಉರುಳಿವೆ. ಕೋರಮಂಗಲ, ಗಾಂಧಿ ನಗರ, ವಿಜಯನಗರ, ಎಂಜಿ ರೋಡ್, ಬಸವನಗುಡಿ, ಕೆಆರ್ ರೋಡ್ ಸೇರಿದಂತೆ ಏಳು ಕಡೆ ಮರಗಳು ಬಿದ್ದಿವೆ. ನಿಮಾನ್ಸ್ ಆಸ್ಪತ್ರೆ ರಸ್ತೆ ಮಧ್ಯೆ ಮರ ಧರೆಗುರುಳಿದಿತ್ತು. ಹೀಗಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಯಿತು. ಫ್ರೀಡಂಪಾರ್ಕ್ ಬಳಿ ಮರ ಬಿದ್ದು ಕಾರು ಜಖಂಗೊಂಡಿತ್ತು.

ರಾಜಾಜಿನಗರದ ಎಂಇ ಪಾಲಿಟೆಕ್ನಿಕ್ ಕಾಲೇಜ್ ಬಳಿಯೂ ಮರವೊಂದು ಧರೆಗುಳಿತು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಬಳಿಕ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ರು. ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಮಳೆಯಿಂದಾಗಿ ಜನರು ಬಸ್‍ಗಾಗಿ ಪರದಾಟ ನಡೆಸಿದ್ರು. ರೈಲ್ವೆ ನಿಲ್ದಾಣದ ಅಂಡರ್‍ಪಾಸ್ ಬಳಿ ನೀರು ನಿಂತು ವಾಹನ ಸವಾರರು ಹೆಣಗಾಡಿದ್ರು. ಮಳೆ ನೀರಿನಿಂದಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಕೆರೆಯಂತಾಗಿತ್ತು. ಟೌನ್‍ಹಾಲ್‍ನಲ್ಲಿ ಸೋರಿಕೆಯಿಂದ ವೇದಿಕೆ ಮೇಲೆ ನೀರು ಬಂದು ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಕೆಲಕಾಲ ಅಡಚಣೆ ಉಂಟಾಯ್ತು.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ, ಇಂದೂ ಕೂಡ ಮಳೆ ಬರೋ ಸಾಧ್ಯತೆಗಳಿವೆ. ಶನಿವಾರ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ ಅಂತ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ರು.

https://www.youtube.com/watch?v=jswNeI2G1P0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *