ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆರೆಯಂತಾದ ರಸ್ತೆ – ಚಿಕ್ಕಬಳ್ಳಾಪುರದಲ್ಲಿ ಕೆರೆ ಬಿರುಕುಬಿಟ್ಟು ಆತಂಕ

Public TV
2 Min Read

– ರಾಯಚೂರು, ಬೀದರ್‍ನಲ್ಲಿ ಬೆಳೆ ಹಾನಿ ಭೀತಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣನ ಅವಾಂತರ ಮುಂದುವರಿದಿದೆ. ಬಿಳೇಕಹಳ್ಳಿ ವಾರ್ಡ್‍ನ ಅನುಗ್ರಹ ಬಡಾವಣೆ ಹಾಗೂ ಅನುಗ್ರಹ ಬಡಾವಣೆಯ 2ನೇ ವಾರ್ಡ್ ಜಲಾವೃತವಾಗಿದೆ. ಬಡಾವಣೆಯ ರಸ್ತೆ ಮೇಲೆ ಮಳೆ ನೀರು ನಿಂತಿದೆ. ಅಲ್ಲದೆ ತಗ್ಗು ಪ್ರದೇಶದ ಮನೆಗಳಿಗೆ ಕೂಡ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ.

ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ಕೆಎಸ್‍ಆರ್‍ಟಿಸಿ ಬಸ್ ಮೇಲೆ ಮರವೊಂದು ಉರುಳಿ ಬಿದ್ದಿದೆ. ಜಯನಗರದಿಂದ ಮಂಗಳೂರಿಗೆ ಬಸ್ ಹೊರಟಿತ್ತು. ಬಸ್ಸಿನಲ್ಲಿ 15 ಮಂದಿ ಪ್ರಯಾಣಿಕರಿದ್ದರು. ಬಸ್ ಮೆಜೆಸ್ಟಿಕ್ ಬಳಿಯ ಕೆಜಿ ರೋಡ್‍ಗೆ ಎಂಟ್ರಿಕೊಡ್ತಿದ್ದಂತೆ ಮರ ಉರುಳಿ ಬಿದ್ದಿದೆ. ಪರಿಣಾಮ ಬಸ್ಸಿನ ಕಿಟಕಿ ಗಾಜುಗಳು ಜಖಂ ಆಗಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಇದನ್ನೂ ಓದಿ: ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

ನಿನ್ನೆ ಆನೇಕಲ್ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ಎಲೆಕ್ಟ್ರಾನ್ ಸಿಟಿ ಸಮೀಪದ ವೀರಸಂದ್ರದ ಬಳಿಯಿರೋ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿತ್ತು. ಜನ ನೀರಲ್ಲೇ ಓಡಾಡುವಂತಾಯ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಆನೇಕಲ್ ತಾಲೂಕಿನಲ್ಲಿ ಧಾರಾಕಾರ ಮಳೆಗೆ ಮನೆ ಕುಸಿದಿದೆ. ಆನೇಕಲ್ ಪಟ್ಟಣದ ಥಳಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ. ರಸ್ತೆ ಅಗಲೀಕರಣಕ್ಕಾಗಿ ಜಿಲ್ಲಾಡಳಿತ ಮನೆಗಳನ್ನು ಖಾಲಿ ಮಾಡಿಸಿತ್ತು. ಹೀಗಾಗಿ ಅನಾಹುತ ತಪ್ಪಿದೆ. ಇನ್ನು ಆನೇಕಲ್‍ನಲ್ಲಿ ಇನ್ನೂ 10ಕ್ಕೂ ಹೆಚ್ಚು ಮನೆ ಕುಸಿಯುವ ಭೀತಿ ಇದ್ದು ಜಿಲ್ಲಾಡಳಿತ ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಪರಿಣಾಮ ಭೋಯಿನಹಳ್ಳಿ ಗ್ರಾಮದ ಬಳಿಯ ಲಕ್ಷ್ಮೀಸಾಗರ ಕೆರೆಯ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕೆರೆ ಬಿರುಕು ಬಿಟ್ಟಿರುವುದರಿಂದ ನೀರು ಸೋರಿಕೆಯಾಗುತ್ತಿದ್ದು, ಯಾವುದೇ ಕ್ಷಣದಲ್ಲಾದ್ರೂ ಕೆರೆ ಹೊಡೆಯಬಹುದೆಂಬ ಆತಂಕ ಎದುರಾಗಿದೆ. ಇನ್ನೂ ಲಕ್ಷ್ಮೀಸಾಗರ ಕೆರೆ ಬಿರುಕು ಬಿಟ್ಟಿರುವ ಪರಿಣಾಮ ಅಧಿಕಾರಿಗಳು ಕೆರೆಯಿಂದ ಏಕಾಏಕಿ ನೀರನ್ನು ಹೊರಬಿಟ್ಟಿದ್ದಾರೆ. ಇದರಿಂದಾಗಿ ರೈತರ ಜಮೀನುಗಳು ಸಂಪೂರ್ಣ ಜಲಾವೃತವಾಗಿದ್ದು, ನೆಲಗಡಲೆ ಸಂಪೂರ್ಣ ಕೊಚ್ಚಿಹೋಗಿದೆ. ರೈತರು ಬೆಳೆದಿದ್ದ ಬೆಳೆ ನೀರಿಗೆ ಕೊಚ್ಚಿಹೋಗಿದ್ದು, ದಿಕ್ಕು ತೋಚದೆ ರೈತರು ಕಂಗಾಲಾಗಿದ್ದಾರೆ.

ಸತತ ಮಳೆಯಿಂದಾಗಿ ಬೀದರ್‍ನ ಕಾರಂಜಾ ಜಲಾಶಯದ ನೀರಿನ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ಜಲಾಶಯದ ಹಿನ್ನೀರಿನಲ್ಲಿ ಬೆಳೆಯಲಾಗಿದ್ದ ಕಬ್ಬು, ಹೆಸರು, ಸೋಯಾ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ. ಕಾರಂಜಾ ಹಿನ್ನೀರಿನ ಸಿರ್ಸಿ ಎ, ಔರಾದ್ ಎಸ್, ನಿಟುವಂಚಾ, ಬಂಬಳಗಿ, ರೇಕುಳಗಿ, ನೆಲವಾಡ್ ಸಂಗೋಳಗಿ ಸೇರಿ 20ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ. ಗದಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅಂತೂರು ಬೆಂತೂರ ಗ್ರಾಮದ ಆರಾಧ್ಯದೈವ ಗಡದೀಶ್ವರ ಹಿರೇಮಠ ಅಜ್ಜನವರ ಕರ್ತೃ ಗದ್ದುಗೆ ಸಂಪೂರ್ಣ ಜಲಾವೃತವಾಗಿದೆ. ನಿತ್ಯ ಮೋಟಾರು ಮೂಲಕ ನೀರು ಹೊರಹಾಕಿದ್ರೂ ಸಹ ಮತ್ತೆ ನೀರಿನ ಮಟ್ಟ ಹೆಚ್ಚಾಗ್ತಿದೆ. ಪರಿಣಾಮ ಪೂಜೆ ಪುರಸ್ಕಾರಗಳನ್ನು ಬಂದ್ ಮಾಡಲಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಯಚೂರಿನ ಹಲವೆಡೆ ಹತ್ತಿ ಬೆಳೆ ಸಂಪೂರ್ಣ ಹಾಳಾಗಿದೆ. ಕೆರೆಗಳು ತುಂಬಿ ಜಮೀನುಗಳಿಗೆ ನೀರು ನುಗ್ಗಿದೆ. ರಾಯಚೂರು ತಾಲೂಕಿನ ಪುಚ್ಚಲದಿನ್ನಿ ಗ್ರಾಮದ ರೈತರು ಹತ್ತಿ ಬೆಳೆಯನ್ನ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಇಲ್ಲಿನ ಗುಂಜಳ್ಳಿ ಕೆರೆ ತುಂಬಿದ್ದರಿಂದ ಜಮೀನುಗಳಿಗೆ ನೀರು ನುಗ್ಗಿದೆ. ಪುಚ್ವಲದಿನ್ನಿ ಜೊತೆ ಮಿಡಗಲದಿನ್ನಿ, ಜಂಬಲದಿನ್ನಿ ಸೇರಿ 8 ಗ್ರಾಮಗಳ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಜಮೀನುಗಳೇ ಕೆರೆಯಂತಾಗಿವೆ.

Share This Article
Leave a Comment

Leave a Reply

Your email address will not be published. Required fields are marked *