ದಾವಣಗೆರೆ, ಕೊಪ್ಪಳದಲ್ಲಿ ವರುಣನ ಆರ್ಭಟ – ಜೋಳಿಗೆಯಲ್ಲಿದ್ದ ಮಗು 20 ಮೀಟರ್ ಹಾರಿ ಬದುಕುಳೀತು

Public TV
2 Min Read

ದಾವಣಗೆರೆ/ಕೊಪ್ಪಳ: ಜಿಲ್ಲೆಯ ಎರಡು ಕಡೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು, ಮಳೆಗೆ ಜೋಳಿಗೆಯಲ್ಲಿ ಹಾಕಿದ್ದ ಮಗುವೊಂದು ಮನೆಯಿಂದ 20 ಮೀಟರ್ ಹಾರಿ ಹೋಗಿ ಬಿದ್ದು, ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ತಾಲೂಕಿನ ಆಚಲಾಪೂರ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಏಕಾಏಕಿ ಭಾರೀ ಬಿರುಗಾಳಿ ಬಿಸಿದೆ. ಈ ವೇಳೆಯಲ್ಲಿ ಶಿವಪ್ಪ ಅನ್ನೋರ ಮಗ ಒಂದೂವರೆ ವರ್ಷದ ಸಾಗರ್ ಮನೆಯಲ್ಲಿ ಕಬ್ಬಿಣದ ಪಟ್ಟಿಗೆ ಜೋಳಿಗೆ ಕಟ್ಟಿ ಅದರಲ್ಲಿ ಮಲಗಿಸಲಾಗಿತ್ತು. ಬೀಸಿದ ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿ ಮನೆಯಿಂದ 20 ಮೀಟರ್ ದೂರದ ಕಲ್ಲಿನ ಪೊದೆಯಲ್ಲಿ ಸಾಗರ್ ಬಿದ್ದಿದ್ದಾನೆ.

ಆಗ ಮನೆಯವರು ಕತ್ತಲಿನಲ್ಲಿ ಹುಡುಕಾಡಿದಾಗ ಸಾಗರ್ ಪ್ರಜ್ಞೆ ತಪ್ಪಿ ಬಿದ್ದಿದ್ದ. ಎಲ್ಲರೂ ಸಾಗರ್ ಸಾವನ್ನಪ್ಪಿದ್ದ ಎಂದು ತಿಳಿದಿದ್ದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷೆ ಮಾಡಿ ಮಗುವಿಗೆ ಏನು ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ. ಇದನ್ನು ನೋಡಿ ಎಲ್ಲರಿಗೂ ಅಚ್ಚರಿಗೊಂಡಿದ್ದಾರೆ.

ಇತ್ತ ಬಿರುಗಾಳಿ ಸಹಿತ ಮಳೆಗೆ ತಾಂಡಾದ ಬಹುತೇಕ ಮನೆಗಳ ಮೇಲ್ಛಾವಣಿಗಳು ಎಲ್ಲೆಂದರಲ್ಲಿ ಹಾರಿ ಹೋಗಿವೆ. ಇದರಿಂದಾಗಿ ಮನೆಯಲ್ಲಿನ ದವಸ ಧಾನ್ಯಗಳು ನೀರಿಗಾಹುತಿ ಆಗಿದ್ದು, ತುತ್ತು ಅನ್ನಕ್ಕೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ತಾಂಡಾದಲ್ಲಿ ವಿದ್ಯುತ್ ಕೈಕೊಟ್ಟಿದೆ. ತಾಂಡಾದ ಜನರು ಮನೆಗಳ ಮೇಲ್ಛಾವಣಿ ಹಾರಿ ಹೋಗಿರುವುದರಿಂದ ಮಕ್ಕಳು, ವೃದ್ಧರಿಗೆ ವಾಸ ಮಾಡಲು ಮನೆಯಿಲ್ಲದೆ ಬಯಲಿನಲ್ಲಿಯೇ ಇರಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ಕೂಡಲೇ ಜಿಲ್ಲಾ ಆಡಳಿತ ಸೂರು ಕಲ್ಪಿಸಬೇಕೆಂದು ಸಂತ್ರಸ್ಥರು ಒತ್ತಾಯಿಸಿದ್ದಾರೆ.

ಇನ್ನು ದಾವಣಗೆರೆಯ ಹರಪನಹಳ್ಳಿ ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಮಳೆಗೆ ಮನೆಗಳ ಮೇಲೆ ಮರಗಳು ಬಿದ್ದಿವೆ. ಉಪ್ಪಾರಗೇರೆ, ಕೊಟ್ಟೂರು ರಸ್ತೆ, ಹುಲಿಕಟ್ಟೆ ರಸ್ತೆಯಲ್ಲಿ ಬಿದ್ದಿರುವ ಮನೆಗಳ ಮೇಲೆ ಬಿದ್ದಿವೆ. ಉಪ್ಪಾರಗೆರೆಯಲ್ಲಿ ಮಾಡ್ಲಗೇರೆ ಉಮೇಶ, ಕೆ.ಲಕ್ಕಪ್ಪ, ಕೆ. ಪರಸಪ್ಪ ಅವರ ಮನೆಗಳು ಜಖಂ ಆಗಿವೆ. ಆದರೆ ಈ ಮಳೆಯ ಅವಘಡದಿಂದ ಜನರು ಮತ್ತು ದನದ ಕೊಟ್ಟಿಗೆಯಲ್ಲಿದ್ದ ಕರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಳೆಯಿಂದ ಚರ್ಚ್ ಆವರಣದಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದ ಪರಿಣಾಮ ಹರಪನಹಳ್ಳಿಗೆ ಬುಧವಾರ ರಾತ್ರಿ ಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಾಹಿತಿ ತಿಳಿದ ಬೆಸ್ಕಾಂ ಮತ್ತು ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಬಂದು ಜೆಸಿಬಿ ಬಳಸಿ ಮರಗಳನ್ನು ತೆರವುಗೊಳಿಸಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *