ಮಳೆಗೆ ಅಬ್ಬರಕ್ಕೆ ಕೆರೆಯಂತಾದ ರೈಲ್ವೆ ಅಂಡರ್ ಪಾಸ್, ಜಲಾವೃತವಾದ ಕಾರು

Public TV
2 Min Read

– ನೆಲಕ್ಕೆ ಉರುಳಿದ ಮರ, ಬಾಳೆ ಸಸಿಗಳು

ಬೆಂಗಳೂರು: ಚಿಕ್ಕಬಳ್ಳಾಪುರ, ಬೆಂಗಳೂರು, ಚಿಕ್ಕಮಗಳೂರು, ಕೋಲಾರ ಸೇರಿದಂತೆ ರಾಜ್ಯದ ವಿವಿಧೆ ಅರುಣ ಅಬ್ಬರಿಸಿದ್ದು, ಮಳೆಯ ಆರ್ಭಟಕ್ಕೆ ಕೆಲವೆಡೆ ಮರಗಳು ನೆಲಕ್ಕೆ ಉರುಳಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಧಾರಕಾರ ಮಳೆಯಾಗಿದೆ. ಜಿಲ್ಲೆಯ ಚಿಂತಾಮಣಿ ನಗರ ಹಾಗೂ ಸುತ್ತಮುತ್ತಲೂ ಆಲಿಕಲ್ಲು ಸಹಿತ ಮಳೆ ಸುರಿದಿದೆ. ನಗರದ ಮುರುಗಮಲ್ಲ ಮಾರ್ಗದ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿ ಕೆರೆಯಂತಾಗಿತ್ತು. ಇದರಿಂದ ಆಳ ಅರಿಯದ ಕಾರು ಚಾಲಕನೋರ್ವ ನೀರಿಗೆ ಬಂದು ಪರದಾಡಿದ ಘಟನೆಯೂ ನಡೆದಿದೆ.

ಕಾರು ನೀರಿನಲ್ಲಿ ಮುಕ್ಕಾಲು ಭಾಗ ಮುಳುಗಿದ್ದು ತದನಂತರ ಕಾರಿನಿಂದ ಇಳಿದು ಚಾಲಕ ಹಾಗೂ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಇತ್ತ ನಗರದ ತಗ್ಗು ಪ್ರದೇಶಗಳು ಸಂಪೂರ್ಣ ಜಲವೃತವಾಗಿವೆ. ರಸ್ತೆಗಳೆಲ್ಲವೂ ನೀರಿನಿಂದ ತುಂಬಿ ತುಳುಕಿವೆ. ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಸುತ್ತ ಮುತ್ತ ಭಾರಿ ಮಳೆಗೆ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಚೀಮಂಗಲ ಗ್ರಾಮದಲ್ಲಿ ಬಾಳೆತೋಟ ನೆಲಕಚ್ಚಿದೆ. ಚಿಕ್ಕಬಳ್ಳಾಪುರ ನಗರಲ್ಲೂ ಧಾರಕಾರ ಮಳೆಯಾಗಿದೆ. ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಮರವೊಂದು ರಸ್ತೆಗೆ ಉರುಳಿಬಿದ್ದು ವಾಹನ ಸವಾರರು ಪರದಾಡಿದ್ದಾರೆ.

ಕೋಲಾರ:
ಬಿಸಿಲಿನ ಬೇಗೆಗೆ ಕಾದು ಕೆಂಡವಾಗಿದ್ದ ಕೋಲಾರದ ವಿವಿಧೆಡೆ ಮಳೆರಾಯ ತಂಪೆರೆದಿದ್ದಾನೆ. ಮಾಲೂರು, ಮುಳಬಾಗಲು, ಕೆಜಿಎಫ್ ಸೇರಿದಂತೆ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿತ್ತು. ಅರ್ಧ ಗಂಟೆ ಧಾರಾಕಾರವಾಗಿ ಮಳೆ ಸುರಿಯಿತು. ಮಳೆ ಹಾಗೂ ಬಿರುಗಾಳಿಗೆ ಬೃಹತ್ ತೆಂಗಿನ ಮರ ಧರೆಗಿಳಿದಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುರಳಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತೆಂಗಿನ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.

ಚಿಕ್ಕಮಗಳೂರು:
ಕಳೆದ ಹದಿನೈದು ದಿನಗಳಿಂದ ಕಾಫಿನಾಡಿನ ಮಲೆನಾಡು ಭಾಗ ಸೇರಿದಂತೆ ಜಿಲ್ಲೆಯಾದ್ಯಂತ ದಿನಬಿಟ್ಟು ದಿನ ಸುರಿಯುತ್ತಿರುವ ರೇವತಿ ಮಳೆ ಅಬ್ಬರಕ್ಕೆ ಕಾಫಿನಾಡಿಗರು ಆತಂಕಕ್ಕೀಡಾಗಿದ್ದಾರೆ. ಇಂದು ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆ ಬೆಳವಾಡಿ ಭಾಗದಲ್ಲಿ ಸುಮಾರು ಅರ್ಧ ಗಂಟೆ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆ-ಗಾಳಿಗೆ ರಂಗಮಂದಿರದ ಕಬ್ಬಿಣ ಮೇಲ್ಛಾವನಿ ಸಂಪೂರ್ಣ ಹಾರಿ ಬಿದ್ದ ಪರಿಣಾಮ ಪಕ್ಕದಲ್ಲಿದ್ದ ಮನೆ ಭಾಗಶಃ ಜಖಂಗೊಂಡಿದೆ. ಮೇಲ್ಛಾವಣಿ ಹಾರಿ ಬೀಳುತ್ತಿದ್ದಂತೆ ಹಂಚಿನ ಮನೆಯ ಮೇಲ್ಛಾವಣಿ ಕೂಡ ಬಹುತೇಕ ಹಾನಿಯಾಗಿ, ಮಳೆ ನೀರು ಮನೆಯೊಳಗೆ ಹರಿದು ಹೋಗಿದೆ. ಮನೆಯಲ್ಲಿದ್ದವರಿಗೂ ಸಣ್ಣಪುಟ್ಟ ಗಾಯವಾಗಿದೆ. ಮನೆಯ ಹಿರಿಯ 65 ವರ್ಷದ ಚನ್ನೇಗೌಡ ಎಂಬವರ ಬಲಗೈಗೆ ತೀವ್ರ ಪೆಟ್ಟಾಗಿದೆ.

Share This Article
Leave a Comment

Leave a Reply

Your email address will not be published. Required fields are marked *