ಧಾರಾಕಾರ ಮಳೆಗೆ ಅವಾಂತರ – ಧರೆಗುರುಳಿದ ಮರಗಳು, ನೂರಾರು ಕೋಳಿ ಸಾವು

Public TV
2 Min Read

-ಕಟಾವಿಗೆ ಬಂದಿದ್ದ ಅಪಾರ ಬಾಳೆ ಬೆಳೆ ನಾಶ

ಮಂಡ್ಯ: ಬುಧವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ರೈತರೊಬ್ಬರ ಮೂರು ಎಕರೆ ಬಾಳೆ ತೋಟ ನಾಶವಾಗಿರುವ ಘಟನೆ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ, ಕೀಳನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ರೈತ ಸ್ವಾಮಿ ತಮ್ಮ ಮೂರೂವರೆ ಎಕರೆ ಕೃಷಿ ಭೂಮಿಯಲ್ಲಿ ಬಾಳೆ ಬೆಳೆದಿದ್ದರು. ಆದರೆ ಮಳೆಯಿಂದಾಗಿ ಒಂದೂವರೆ ಸಾವಿರಕ್ಕೂ ಹೆಚ್ಚಿನ ಏಲಕ್ಕಿ ಬಾಳೆ ಗಿಡಗಳು ಅರ್ಧಕ್ಕೆ ಮುರಿದಿದ್ದು, ಬಾಳೆಗೊನೆಯ ಸಮೇತವಾಗಿ ನೆಲಕ್ಕುರುಳಿವೆ. ಇನ್ನೊಂದು ತಿಂಗಳಲ್ಲಿ ಕಟಾವಾಗಬೇಕಿದ್ದ ಏಲಕ್ಕಿ ಬಾಳೆಗೊನೆಗಳು ನೆಲಕಚ್ಚಿದ್ದರಿಂದ ರೈತ ಸ್ವಾಮಿ ಆತಂಕಕ್ಕೆ ಒಳಗಾಗಿದ್ದಾರೆ. ಬೆಳೆ ನಾಶಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಿ ಸಹಾಯ ಮಾಡಬೇಕು ಎಂದು ರೈತ ಸ್ವಾಮಿ ಮನವಿ ಮಾಡಿದ್ದಾರೆ.

ಇತ್ತ ಫನಿ ಚಂಡಮಾರುತದ ಹಿನ್ನೆಲೆಯಲ್ಲಿ ರಾತ್ರಿ ಸುರಿದ ಜೋರು ಗಾಳಿ ಸಹಿತ ಮಳೆಯಿಂದ ರಾಮನಗರ ಜಿಲ್ಲೆಯಾದ್ಯಂತ ಹಲವಾರು ಅವಾಂತರಗಳು ಉಂಟಾಗಿತ್ತು. ಜಿಲ್ಲೆಯಾದ್ಯಂತ ನಿನ್ನೆ ಸಾಯಂಕಾಲ ಹಾಗೂ ರಾತ್ರಿ ಜೋರು ಗಾಳಿ ಸಹಿತ ಮಳೆಯಾಗಿದೆ. ಜೋರು ಗಾಳಿಯಿಂದಾಗಿ ಜಿಲ್ಲೆಯಾದ್ಯಂತ 50ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಸಹ ಧರೆಗುರುಳಿವೆ.

ಕನಕಪುರದ ಹಲವೆಡೆ ಮರಗಳು ಧರೆಗುರುಳಿವೆ. ಮಳಗಾಳು, ಕನಕಪುರ ಟೌನ್ ಕೋಟೆ ಸೇರಿದಂತೆ ಗ್ರಾಮಾಂತರ ಭಾಗದಲ್ಲೂ ಸಹ ಮರಗಳು ಉರುಳಿವೆ. ಚನ್ನಪಟ್ಟಣ ತಾಲೂಕಿನ ಕಳ್ಳಿ ಹೊಸೂರು ಗ್ರಾಮದ ಮಲ್ಲಿಕಾರ್ಜುನಯ್ಯ ಹಾಗೂ ಚೇತನ್ ಕುಮಾರ್ ಎಂಬವರು ಬೆಳೆದಿದ್ದ ಕಟಾವಿಗೆ ಬಂದಿದ್ದ ಸುಮಾರು ಎರಡುವರೆ ಎಕರೆ ಬಾಳೆ ತೋಟ ಸಂಪೂರ್ಣವಾಗಿ ನೆಲಕ್ಕಚ್ಚಿದೆ. 3-4 ಲಕ್ಷ ಖರ್ಚು ಮಾಡಿ ಇನ್ನೇನು ಬಾಳೆಗೊನೆಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ನಿರೀಕ್ಷೆಯಲ್ಲಿದ್ದ ರೈತರು ಇದೀಗ ಸಾಲ ಮಾಡಿರುವ ಹಣ ತೀರಿಸೋಕು ಸಹ ಪರದಾಡುವಂತಾಗಿದೆ. ಸಂಪೂರ್ಣವಾಗಿ ಬಾಳೆ ತೋಟವೇ ಬಾಳೆಗೊನೆಗಳ ಸಹಿತ ನೆಲಕ್ಕುರುಳಿರುವುದರಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಪರಿಹಾರ ಒದಗಿಸುವಂತೆ ರೈತರು ಮನವಿ ಮಾಡಿದ್ದಾರೆ.

ಇನ್ನೂ ತುಮಕೂರಿನಲ್ಲಿ ಕೋಳಿಫಾರಂ ಮೇಲೆ ಹಲಸಿನ ಮರ ಬಿದ್ದ ಪರಿಣಾಮ ನೂರಾರು ಕೋಳಿ ಮರಿಗಳು ಸಾವನ್ನಪ್ಪಿವೆ. ಗ್ರಾಮದ ಮಲ್ಲೇಶ್ ಎಂಬವರಿಗೆ ಸೇರಿದ ಕೋಳಿಫಾರಂ ಇದಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಲ್ಲದೆ ಗೊರಗೊಂಡನಹಳ್ಳಿಯ ರೈತ ಶಿವಕುಮಾರ್ ಗೆ ಸೇರಿದ ಸುಮಾರು ಎರಡು ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡ ನಾಶವಾಗಿದೆ. ಕೊರಟಗೆರೆಯಲ್ಲೂ ವರುಣನ ಅಬ್ಬರ ಜೋರಾಗಿತ್ತು, ಸುಮಾರು 30 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗೆ ಹಾನಿಯಾಗಿದೆ.

ಅದೇ ರೀತಿ ರೈತ ತುಕಾರಾಂ ಅವರ 2 ಎಕರೆ ಬಾಳೆ ತೋಟದಲ್ಲಿ 1 ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ಬಿರುಗಾಳಿಯಿಂದ ನಾಶವಾಗಿದೆ. ಬರದ ನಾಡು ಪಾವಗಡದಲ್ಲೂ ಮಳೆರಾಯ ಅಬ್ಬರಿಸಿ ಹಾನಿ ಮಾಡಿದ್ದಾನೆ. ಹೊಸಕೋಟೆ ಇಂದ್ರಬೆಟ್ಟ ಗ್ರಾಮದ ಕವಿ ಕುಮಾರ್ ಹಾಗೂ ಬೋಡಿ ಗಂಗಪ್ಪ ಅವರ ಮನೆಗಳಿಗೆ ರಾತ್ರಿ ಸಿಡಿಲು ಬಡಿದು ವಾಸವಿರುವ ಎರಡೂ ಮನೆಗಳು ನಾಶವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *