ರಾಜ್ಯದ ಹಲವೆಡೆ ಗಾಳಿ ಸಹಿತ ಭಾರೀ ಮಳೆ: ಸಿಡಿಲು ಬಡಿದು ಮೂವರ ಸಾವು

Public TV
1 Min Read

ಬೆಂಗಳೂರು: ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆಯಾಗಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಮೈಸೂರು, ಕೋಲಾರ, ಚಾಮರಾಜನಗರ, ಧಾರವಾಡ, ಹುಬ್ಬಳ್ಳಿ, ಯಾದಗಿರಿ, ದಾವಣಗೆರೆ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಕೋಲಾರದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಮೆಣಸಿಕಾಯಿ, ಟೊಮೆಟೋ ಮುಂತಾದ ಬೆಳೆಗಳು ನಾಶವಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ಗುರುವಾರ ಸುರಿದ ಮಳೆಗೆ ರೈತರು ಬರದ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ನೆಲಕಚ್ಚಿವೆ. ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ನಿವಾಸಿ ಉಮೇಶ್ ಪಾಟೀಲ್ (18) ಎಂಬವರಿಗೆ ಸಿಡಿಲು ತಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಮೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯಲ್ಲೂ ಮಳೆಯಾಗಿದ್ದು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಧಾರವಾಡ ನಗರದಲ್ಲಿ ಮಧ್ಯಾಹ್ನದಿಂದ ಮಳೆ ಸುರಿಯುತ್ತಿದ್ದು, ರಸ್ತೆಯ ಬದಿಯ ಬೃಹತ್ ಮರುಗಳು ಬಿದ್ದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನೂ ಧಾರವಾಡ ನಗರದ ಕೆಲವು ಕಡೆ ಮರಗಳು ವಾಹನಗಳ ಮೇಲೆಯೇ ಬಿದ್ದಿದ್ದರಿಂದ ಬೈಕ್‍ಗಳು ಜಖಂಗೊಂಡಿವೆ.

ಚಿಕ್ಕಬಳ್ಳಾಪುರದಲ್ಲಿ ಅಲಿಕಲ್ಲು ಸಹಿತ ಮಳೆಯಾಗಿದ್ದರಿಂದ ಗೇರಹಳ್ಳಿ ಗ್ರಾಮದ ರೈತ ಸುಬ್ಬರಾಯಪ್ಪ ಅವರು ಅಪಾರ ಸಾಲ ಮಾಡಿ ಬೆಳದಿದ್ದ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿದೆ. ದಾವಣಗೆರೆಯಲ್ಲಿ ತುಂತುರು ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಸ್ಥಳೀಯರಲ್ಲಿ ಖುಷಿ ತಂದಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಾಶ್ (10), ಪುಟ್ಟ (8) ಮಕ್ಕಳು ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿಯೂ ಕೃಷ್ಣ ಮತ್ತು ಲಕ್ಷ್ಮಿ ದಂಪತಿಗಳ 4 ತಿಂಗಳ ಗಂಡು ಮಗು ಸಾವನ್ನಪ್ಪಿದೆ. ಯಾದಗಿರಿ ತಾಲೂಕಿನ ಹಳೆಗೇರಾ ಗ್ರಾಮದಲ್ಲಿ ಸಿಡಿಲು ತಾಗಿ ಕುರಿಗಾಹಿಯೊಬ್ಬರ 30 ಕುರಿಗಳು ಸೇರಿದಂತೆ ಒಂದು ನಾಯಿ ಸಾವನ್ನಪ್ಪಿವೆ.

 

Share This Article
Leave a Comment

Leave a Reply

Your email address will not be published. Required fields are marked *