ಕರ್ನಾಟಕದಲ್ಲಿ 4 ಕೊರೊನಾ ಪಾಸಿಟಿವ್ ಕೇಸ್: ಶ್ರೀರಾಮುಲು ಸ್ಪಷ್ಟನೆ

Public TV
2 Min Read

-ಬೆಂಗ್ಳೂರಿನಲ್ಲಿ ಮೂರು ಕೊರೊನಾ ಕೇಸ್

ಬೆಂಗಳೂರು: ಕರ್ನಾಟಕದಲ್ಲಿ 4 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಸ್ಪಷ್ಟನೆ ನೀಡಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದಲ್ಲಿ ಇದುವರೆಗೆ 4 ವ್ಯಕ್ತಿಗಳಲ್ಲಿ #COVID19 ಸೋಂಕು ದೃಢಪಟ್ಟಿದ್ದು, ಅವರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಗರಿಕರು ಮುಂಜಾಗೃತ ಕ್ರಮ ವಹಿಸಿ ಸೋಂಕು ಹರಡದಂತೆ ಸಹಕರಿಸಬೇಕು ಎಂದು ಕೋರುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ಮೂರು ಕೊರೊನಾ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಮ ಹೇಳಿಕೆ ಬಿಡುಗಡೆ ಮಾಡಿತ್ತು. ಮಾರ್ಚ್ 1ರಂದು ಅಮೆರಿಕದಿಂದ ಆಗಮಿಸಿದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ತಿಳಿಸಿತ್ತು.

ಸಾಫ್ಟ್ ವೇರ್ ಎಂಜಿನಿಯರ್, ಪತ್ನಿ, ಮಗಳ ಜೊತೆ ಚಾಲಕನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ 982 ಮಂದಿ ಮೇಲೆ ನಿಗಾ ಇರಿಸಲಾಗಿದೆ. ಈ ಪೈಕಿ ಕಳೆ 28 ದಿನಗಳಿಂದ 266 ಮಂದಿ ಮೇಲೆ ನಿಗಾ ಇಟ್ಟಿದ್ದರೆ 700 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ನಿಗಾ ಇರಿಸಲಾಗಿದೆ. ಅಲ್ಲದೇ ಸೋಮವಾರ 12 ಮಂದಿ ವಿವಿಧ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಲ್ಲಿಯವರೆಗೆ 432 ಮಂದಿಯ ರಕ್ತದ ಮಾದರಿಯನ್ನು ಲ್ಯಾಬ್‍ಗೆ ಕಳುಹಿಸಲಾಗಿದ್ದು 364 ಮಂದಿ ಫಲಿತಾಂಶ ನೆಗೆಟಿವ್ ಬಂದಿದೆ. 68 ಮಂದಿಯ ಫಲಿತಾಂಶ ಲಭ್ಯವಾಗಬೇಕಿದೆ. ಬೆಂಗಳೂರಿನಲ್ಲಿ 8, ಮಂಗಳೂರಿನಲ್ಲಿ 2, ಬಾಗಲಕೋಟೆ ಮತ್ತು ಹಾಸನದಲ್ಲಿ ತಲಾ ಒಂದೊಂದು ಮಂದಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿತ್ತು.

ಇಲ್ಲಿಯವರೆಗೆ ಒಟ್ಟು 91,911 ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 61,585 ಮಂದಿ, ಮಂಗಳೂರಿನಲ್ಲಿ 25,003 ಮಂದಿಯನ್ನು ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕಾರವಾರ ಮತ್ತು ಮಂಗಳೂರು ಬಂದರಿನಲ್ಲಿ ಒಟ್ಟು 5,323 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ ಎಂದು ತಿಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *