ಉಪಯುಕ್ತ ಔಷಧಿಗಳ ಸಂಜೀವಿನಿ ತುಳಸಿ

Public TV
2 Min Read

ಕೆಲವೊಮ್ಮೆ ನಮ್ಮ ಮನೆಯಂಗಳದಲ್ಲಿ ಬೆಳೆದಿರುವ ಸಣ್ಣಪುಟ್ಟ ಔಷಧೀಯ ಸಸ್ಯಗಳ ಉಪಯೋಗಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ನೋಡಲು ಗಾತ್ರ ಚಿಕ್ಕದಿದ್ದರೂ ಅದರ ಲಾಭಗಳು ಹೆಚ್ಚು, ಈ ಸಸ್ಯಗಳು ನಮ್ಮೆಲ್ಲಾ ರೋಗಗಳಿಗೆ ಸಿದ್ಧೌಷಧವಾಗಿರುತ್ತದೆ. ಅಂತಹದ್ದೇ ಒಂದು ಪುಟ್ಟ ಸಸ್ಯವೇ ‘ತುಳಸಿ’.

ಹೌದು. ಅನೇಕ ಔಷಧೀಯ ಗುಣಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ತುಳಸಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಲ್ಲದೆ ತುಳಸಿ ಗಿಡಕ್ಕೆ ಪವಿತ್ರ ಸ್ಥಾನವನ್ನೂ ಕೂಡ ನೀಡಲಾಗಿದೆ. ಅದರಲ್ಲೂ ಹಿಂದೂಗಳು ತುಳಸಿಯನ್ನು ದೇವರು ಎಂದು ಪೂಜಿಸುತ್ತಾರೆ. ಆಯುರ್ವೇದದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ಇಷ್ಟೆಲ್ಲಾ ವಿಶೇಷತೆ ಹೊಂದಿರುವ ತುಳಸಿ ಎಲೆಗಳನ್ನು ಆಹಾರ ರೂಪದಲ್ಲಿ ಸೇವಿಸಿದರೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದರ ಎಲೆಯನ್ನು ಹಾಗೆಯೇ ತಿನ್ನಲು ಇಷ್ಟವಾಗದಿದ್ದರೆ, ಚಹಾ, ಪಾನಕಗಳಲ್ಲಿ ತುಳಸಿ ಎಲೆಗಳನ್ನು ಬೆರೆಸಿ ಸೇವಿಯಬಹುದು.

ತುಳಸಿ ಸೇವನೆಯ ಲಾಭವೇನು?

ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ:
ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ಅದು ನಮ್ಮ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ ಹಾಗೂ ಉದರ ಬಾಧೆಗಳನ್ನು ನಿವಾರಿಸಿ, ದೇಹಕ್ಕೆ ಶಕ್ತಿ ಕೊಡುತ್ತದೆ. ಹಾಗಂತ ಹೆಚ್ಚಿನ ಪ್ರಮಾಣದಲ್ಲಿ ತುಳಸಿ ಸೇವನೆ ಮಾಡಬಾರದು, ಮಿತವಾಗಿ ಬಳಸಬೇಕು.

ಜ್ವರ ಹಾಗೂ ಶೀತಕ್ಕೆ ಒಳ್ಳೆಯ ಮನೆಮದ್ದು:
ಹೌದು. ತುಳಸಿ ಎಲೆಗಳನ್ನು ಸೇವಿಸುವುದರಿಂದ ಜ್ವರ ಹಾಗೂ ಶೀತ ಕಡಿಮೆಯಾಗುತ್ತದೆ. ಸ್ವಲ್ಪ ತುಳಸಿ ಎಲೆಗಳನ್ನು ಚಹಾದೊಂದಿಗೆ ಕುದಿಸಿ ಕುಡಿಯುವುದರಿಂದ ಮಲೇರಿಯಾ ಹಾಗೂ ಡೆಂಗ್ಯೂ ಜ್ವರ ಉಪಶಮನವಾಗುತ್ತದೆ. ಹಾಗೆಯೇ ತುಳಸಿ ರಸ ಜ್ವರವನ್ನು ತಗ್ಗಿಸುವಲ್ಲಿ ಸಹಕಾರಿಯಾಗಿದ್ದು, ಇದರ ಎಲೆಯನ್ನು ಜಗಿಯುವುದರಿಂದ ಶೀತ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.

ಜೀರ್ಣಶಕ್ತಿ ಉತ್ತಮಗೊಳಿಸುತ್ತದೆ:
ಜೀರ್ಣಶಕ್ತಿ ಉತ್ತಮವಾಗಿದ್ದರೆ ಮನುಷ್ಯ ಆರೋಗ್ಯವಾಗಿ ಇರುತ್ತಾನೆ. ಹೀಗಾಗಿ ತುಳಸಿ ಎಲೆಗಳನ್ನು ಸೇವಿಸಿ ಜೀರ್ಣಶಕ್ತಿಯನ್ನು ವೃದ್ಧಿಸಿಕೊಂದು ಆರೋಗ್ಯವಾಗಿ ಇರಬಹುದು.

ತಲೆನೋವಿಗೆ ಉಪಶಮನ ನೀಡುತ್ತದೆ:
ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ದೂರವಾಗುತ್ತದೆ. ಹೀಗಾಗಿ ಅನೇಕ ತಲೆನೋವು ಔಷಧಿಗಳಲ್ಲಿ ತುಳಸಿ ಎಲೆಗಳನ್ನು ಬಳಸಲಾಗುತ್ತದೆ.

ಡಯಾಬಿಟಿಸ್ ನಿಯಂತ್ರಿಸುತ್ತದೆ:
ತುಳಸಿ ಗಿಡದ ಬೇರನ್ನು ಒಣಗಿಸಿ, ಪುಡಿಮಾಡಿ ಪ್ರತಿದಿನ ರಾತ್ರಿ ಮಲಗುವ ಮುನ್ನ ನೀರಿನಲ್ಲಿ ಬೆರಸಿ ಸೇವಿಸಬೇಕು. ಹೀಗೆ ಮಾಡಿದರೆ ನಿಮ್ಮ ದೇಹದಲ್ಲಿರುವ ಇನ್ಸುಲಿನ್ ಮಟ್ಟವನ್ನು ತುಳಸಿ ನಿಯಂತ್ರಿಸುತ್ತದೆ. ಇದರಿಂದ ನೈಸರ್ಗಿಕವಾಗಿ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

ಕಿಡ್ನಿ ಸ್ಟೋನ್ ಕಡಿಮೆ ಮಾಡುತ್ತದೆ:
ಕಿಡ್ನಿ ಸ್ಟೋನ್ ಕಡಿಮೆ ಮಾಡಿಕೊಳ್ಳಲು ತುಳಸಿ ಎಲೆ ರಸ ಒಂದೊಳ್ಳೆ ಮನೆಮದ್ದಾಗಿದೆ. ತುಳಸಿ ರಸವನ್ನು ಜೇನಿನೊಂದಿಗೆ ಸೇರಿಸಿ, ನಿಯಮಿತವಾಗಿ 6 ತಿಂಗಳು ಸೇವಿಸಿದರೆ ಕಿಡ್ನಿ ಸ್ಟೋನ್ ಕಡಿಮೆಯಾಗುತ್ತದೆ.

ಹೀಗಿ ಸಾಕಷ್ಟು ಆರೋಗ್ಯಕರ ಅಂಶವನ್ನು ತುಳಸಿ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಹೀಗಾಗಿ ನಿಮ್ಮ ದಿನನಿತ್ಯದ ಆಹಾರದಲ್ಲಿ ಮಿತವಾಗಿ ತುಳಸಿ ಬಳಸಿ, ಆರೋಗ್ಯವನ್ನು ಕಾಯ್ದುಕೊಳ್ಳಿ.

Share This Article
Leave a Comment

Leave a Reply

Your email address will not be published. Required fields are marked *