ಮಾವಿನ ಹಣ್ಣು ಮಾತ್ರವಲ್ಲ ಎಲೆಗಳಲ್ಲಿಯೂ ಇದೆ ಔಷಧೀಯ ಗುಣ

Public TV
2 Min Read

ಮಾವಿನ ಹಣ್ಣು ಎಂದಾಕ್ಷಣ ಬಾಯಲ್ಲಿ ನೀರು ಬರುತ್ತೆ. ಕೇವಲ ರುಚಿಗೆ ಮಾತ್ರವಲ್ಲ ಶುಭ ಸಂದರ್ಭಗಳಲ್ಲೂ ಮಾವಿಗೆ ವಿಶೇಷ ಸ್ಥಾನ ನೀಡಲಾಗುತ್ತದೆ. ಆದರೆ ಮಾವಿನ ಎಲೆಗಳನ್ನು ಮಾತ್ರ ಯಾರೂ ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಹಬ್ಬಗಳಲ್ಲಿ ಮಾವಿನ ಎಲೆಗಳ ತೋರಣ ಕಟ್ಟುವುದು ಒಂದು ಸಂಪ್ರದಾಯ. ಆದರೆ ಈ ಎಲೆಗಳ ಔಷಧೀಯ ಗುಣಗಳನ್ನು ತಿಳಿಯದವರು ಎಲೆಗಳನ್ನು ಹಾಗೇ ಎಸೆದು ಬಿಡುತ್ತಾರೆ. ಮಾವಿನ ಹಣ್ಣಿನಂತೆ ಅದರ ಎಲೆಗಳಲ್ಲಿಯೂ ಅಮೂಲ್ಯವಾದ ಔಷಧೀಯ ಗುಣಗಳಿವೆ. ಆದರೆ ಈ ಬಗ್ಗೆ ಹಲವರಿಗೆ ತಿಳಿದಿಲ್ಲ.

ಹೌದು. ಮಾವಿನ ಎಲೆಗಳ ವಿಶೇಷತೆ ಹೆಚ್ಚಿಸುವುದು ಇದರಲ್ಲಿರುವ ಟ್ಯಾನಿನ್ ಎಂಬ ಪೋಷಕಾಂಶ. ಇದು ಪ್ರಾರಂಭಿಕ ಹಂತದಲ್ಲಿರುವ ಮಧುಮೇಹವನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಮಾವಿನ ಎಲೆಯಲ್ಲಿ ವಿಟಮಿನ್ ಎ, ಬಿ.ಸಿ, ಫೆನಾಲ್ ಮತ್ತು ಫ್ಲೇವನಾಯ್ಡುಗಳಿವೆ. ಮಾವಿನ ಎಲೆಗಳನ್ನು ಹಲವು ವಿಧದಲ್ಲಿ ಬಳಸಬಹುದಾಗಿದೆ. ಅದರಲ್ಲೂ ಬಲಿತ ಮಾವಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ, ಕುಟ್ಟಿ ಪುಡಿ ಮಾಡಿಟ್ಟುಕೊಂಡು ಬಳಸುವುದು ಆರೋಗ್ಯಕ್ಕೆ ಉತ್ತಮ. ಮಾವಿನ ಎಲೆಗಳು ಮಧುಮೇಹ, ಅಸ್ತಮಾ ರೋಗಕ್ಕೆ ರಾಮಬಾಣವಾಗಿದೆ. ಮಾವಿನ ಎಲೆಗಳನ್ನು ಕುದಿಸಿ, ಬಸಿದು ಅದರ ರಸವನ್ನು ಸೇವಿಸಿದರೂ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು.

ಮಾವಿನ ಎಲೆಗಳ ಲಾಭವೇನು?:
ಮಧುಮೇಹ ನಿಯಂತ್ರಣ:
ಒಂದು ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ಹಸಿ ಎಲೆಗಳನ್ನು ಕತ್ತರಿಸಿ ಸೇರಿಸಿ. ಈ ನೀರನ್ನು ಇಡೀ ರಾತ್ರಿ ನೆನೆಯಲು ಬಿಟ್ಟು, ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿರುವಾಗ ಕುಡಿಯಬೇಕು. ಇದು ಪ್ರಾರಂಭಿಕ ಹಂತದಲ್ಲಿರುವ ಮಧುಮೇಹವನ್ನು ನಿಯಂತ್ರಿಸುತ್ತದೆ.

ಉಸಿರಾಟದ ತೊಂದರೆ ನಿವಾರಿಸುತ್ತೆ:
ಉಸಿರಾಟದ ತೊಂದರೆ ಇದ್ದರೆ ಎರಡು ಕಪ್ ನೀರಿಗೆ ಕೆಲವು ಮಾವಿನ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ ಕುದಿಸಬೇಕು. ಬಳಿಕ ಅದನ್ನು ತಣಿಸಿ, ಹದಿನೈದು ನಿಮಿಷದ ಬಳಿಕ ಸೋಸಿ, ಆ ನೀರಿಗೆ ಮೂರು ಹನಿ ಜೇನು ಸೇರಿಸಿ ಕುಡಿಯಬೇಕು. ಇದರಿಂದ ಕೆಮ್ಮು, ಶ್ವಾಸನಾಳಗಳಲ್ಲಿ ಕಟ್ಟಿಕೊಂಡಿದ್ದ ಕಫ ಕರಗಿ ಉಸಿರಾಟ ಸರಾಗವಾಗುತ್ತದೆ.

ಮೂತ್ರಪಿಂಡಗಳ ಕಲ್ಲುಗಳಿಗೆ ಮದ್ದು:
ಒಂದು ಚಿಕ್ಕ ಚಮಚ ಒಣ ಮಾವಿನ ಎಲೆಗಳ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಸೇರಿಸಿ, ಇಡೀ ರಾತ್ರಿ ಹಾಗೇ ಬಿಡಬೇಕು. ನಂತರ ಮರುದಿನ ಬೆಳಗ್ಗೆ ಈ ನೀರನ್ನು ಸೋಸಿ ಕಾಲಿ ಹೊಟ್ಟೆಗೆ ಸೇವಿಸಿದರೆ ಮೂತ್ರಪಿಂಡಗಳಲಿದ್ದ ಕಲ್ಲಿನ ಅಂಶಗಳು ಕರಗುತ್ತದೆ. ಹೀಗಾಗಿ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವ ಸಂಭವ ಕಡಿಮೆಯಾಗುತ್ತದೆ ಹಾಗೂ ಕಲ್ಲುಗಳಿದ್ದರೆ ಕರಗುತ್ತವೆ.

ಮನಸ್ಸಿನ ನಿರಾಳತೆಗೆ: 
ಒಂದು ವೇಳೆ ಮಾನಸಿಕವಾಗಿ ಬಹಳ ಒತ್ತಡ ಅನುಭವಿಸುತ್ತಿದ್ದರೆ, ಎರಡು ಅಥವಾ ಮೂರು ಕಪ್ ಒಣ ಮಾವಿನ ಎಲೆಗಳ ಪುಡಿಯನ್ನು ಕುದಿಸಿ ಸೋಸಿದ ನೀರನ್ನು ಸ್ನಾನ ಮಾಡುವ ಬಕೆಟ್ಟಿನ ನೀರಿಗೆ ಬೆರೆಸಿ. ಈ ನೀರಿನಿಂದ ಸ್ನಾನ ಮಾಡಿದರೆ ಮನಸ್ಸು ನಿರಾಳವಾಗುತ್ತದೆ.

ರಕ್ತದೊತ್ತಡ ನಿಯಂತ್ರಿಸುತ್ತದೆ:
ಒಣ ಮಾವಿನ ಎಲೆಗಳ ಪುಡಿಯಿಂದ ತಯಾರಿಸಿದ ಟೀ ಕುಡಿಯುವ ಮೂಲಕ ರಕ್ತದೊತ್ತಡ ನಿಯಂತ್ರಿಸಬಹುದು. ಅಲ್ಲದೇ ಈ ರೀತಿ ಮಾವಿನ ಎಲೆಗಳ ಆರೋಗ್ಯಕರ ಅಂಶ ದೇಹ ಸೇರಿ ರಕ್ತನಾಳಗಳನ್ನೂ ಆರೋಗ್ಯವಾಗಿರಿಸುತ್ತದೆ.

Share This Article
Leave a Comment

Leave a Reply

Your email address will not be published. Required fields are marked *