ಪಾಪ ಬಿಎಸ್‍ವೈ ಮೇಲೆ ಸಿದ್ದರಾಮಯ್ಯಗೆ ಅನುಕಂಪ, ಆದ್ರೆ ನಾನು ಸಿಎಂ ಆಗಿದ್ದಾಗ ಹೀಗಿರಲಿಲ್ಲ: ಹೆಚ್‍ಡಿಕೆ

Public TV
2 Min Read

-ಎಂಟಿಬಿ, ವಿಶ್ವನಾಥ್‍ದು ಮುಗಿದ ಅಧ್ಯಾಯ

ಕೋಲಾರ: ಪಾಪ ಯಡಿಯೂರಪ್ಪನವರ ಮೇಲೆ ಸಿದ್ದರಾಮಯ್ಯನವರು ಅನುಕಂಪ ತೋರಿಸುತ್ತಿದ್ದಾರೆ. ಆದರೆ 14 ತಿಂಗಳು ನಾನು ಹಿಂಸೆ ಪಟ್ಟಾಗ ಸಿದ್ದರಾಮಯ್ಯ ಅವರು ಅನುಕಂಪ ತೋರಿಸಲಿಲ್ಲವೆಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಕಿಡಿಕಾರಿದ್ದಾರೆ.

ಕುಮಾರಸ್ವಾಮಿಯವರು ಕೋಲಾರ ತಾಲೂಕಿನ ಕಲ್ಲಂಡೂರು ಗ್ರಾಮದಲ್ಲಿ ಚಂದ್ರಮೌಳೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ನಂತರ ಬಿಜೆಪಿ ಪಕ್ಷದಲ್ಲಿ ಏನೂ ಬೇಕಾದರೂ ಆಗಬಹುದು. ಸಂಪುಟ ವಿಸ್ತರಣೆಯಲ್ಲಿ ಗೊಂದಲ ಇರೋದು ಗಮನಿಸಿದ್ದೇನೆ, ನಾನು ಯಾವ ಶಾಸಕರನ್ನು ಸಂಪರ್ಕಿಸಿಲ್ಲ. ಸರ್ಕಾರದ ಕೆಲಸಗಳಲ್ಲಿ ಮೂಗು ತೂರಿಸೋದು ಸರಿಯಲ್ಲ, ಸಮಸ್ಯೆಗಳನ್ನು ಸರಿಪಡಿಸಿಕೊಳ್ಳೋದು ಬಿಜೆಪಿಗೆ ಬಿಟ್ಟ ವಿಚಾರ ಎಂದು ಕುಮಾರಸ್ವಾಮಿ ಹೇಳಿದರು.

ಇದೇ ವೇಳೆ ಕೋಡಿ ಮಠ ಸ್ವಾಮೀಜಿಯ ಭವಿಷ್ಯದ ಕುರಿತು ಪ್ರತಿಕ್ರಿಯಿಸಿ, ನನಗೆ ಭವಿಷ್ಯ ಹೇಳೋದಕ್ಕೆ ಬರಲ್ಲ, ಏನಾಗುತ್ತೆ ಅಂತ ನೋಡೋಣ ಎಂದರು. ಸಿಎಂ ಯಡಿಯೂರಪ್ಪನವರ ಅನುಭವದಲ್ಲಿ ಇವೆಲ್ಲ ಸರ್ವೆ ಸಾಮಾನ್ಯ. ಬಿಎಸ್‍ವೈಗೆ ಇರುವ ಅನುಭವದಲ್ಲಿ ಇದರಿಂದ ಹೊರ ಬರುತ್ತಾರೆ ಎಂದು ವ್ಯಂಗ್ಯವಾಡಿದರು.

ಪಾಪ ಯಡಿಯೂರಪ್ಪನವರ ಮೇಲೆ ಸಿದ್ದರಾಮಯ್ಯನವರು ಅನುಕಂಪ ತೋರಿಸುತ್ತಿದ್ದಾರೆ. ಆದರೆ 14 ತಿಂಗಳು ನಾನು ಹಿಂಸೆ ಪಟ್ಟಾಗ ಸಿದ್ದು ಅನುಕಂಪ ತೋರಿಸಲಿಲ್ಲವೆಂದು ಕಿಡಿಕಾರಿದರು. ಸಿದ್ದರಾಮಯ್ಯನವರ ಬದಾಮಿ ಕ್ಷೇತ್ರಕ್ಕೆ ಹಣ ಬಂದಿದ್ದು ನನ್ನ ಕಾಲದಲ್ಲಿ. ಹಣ ಬಿಡುಗಡೆಗೆ ಅನುಮತಿ ಕೊಟ್ಟಿದ್ದು ನನ್ನ ಸರ್ಕಾರದಲ್ಲಿ ಅನ್ನೋದನ್ನ ಅವರು ಮನವರಿಕೆ ಮಾಡಿಕೊಳ್ಳಲಿ. ಮೈತ್ರಿ ಸರ್ಕಾರವನ್ನು ನಾನು ಮಾರಾಟಕಿಟ್ಟಿರಲಿಲ್ಲ. ನಾನು ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರಿಗೆ ಅನುದಾನ ನೀಡಿದ್ದೇನೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯನವರು ನಮ್ಮ ಕುಟುಂಬದ ಮೇಲೆ ವೈಯಕ್ತಿಕ ಟೀಕೆ ಮಾಡಿಕೊಳ್ಳಲಿ, ಯಾವುದೇ ನೀರಾಶೆಗೆ ಒಳಗಾಗದೆ ಸಿದ್ದರಾಮಯ್ಯನವರು ಟೀಕೆ ಮಾಡಲಿ. ಆದರೆ ಅವರು ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಬಾರದು ಎಂದು ವಾಗ್ದಾಳಿ ನಡೆಸಿದರು.

ಎಂಟಿಬಿ ನಾಗರಾಜ್ ಹಾಗೂ ಹೆಚ್. ವಿಶ್ವನಾಥ್ ವಿಚಾರ ಮುಗಿದ ಅಧ್ಯಾಯ ಅದರ ಬಗ್ಗೆ ಮಾತನಾಡಲ್ಲ, ಅವರ ಬಗ್ಗೆ ಮಾತನಾಡಿ ಏನು ಪ್ರಯೋಜನವಿಲ್ಲ ಎಂದರು. ಇನ್ನು ನೂತನ ಸಚಿವ ನಾರಾಯಣಗೌಡ ಬಗ್ಗೆ ಏಕೆ ಮಾತಾಡಲಿ, ಅಂತವರು ರಾಜಕೀಯಕ್ಕೆ ಬರುತ್ತಾರೆ ಹೋಗುತ್ತಾರೆ ಎಂದು ಹೆಚ್‍ಡಿಕೆ ಟಾಂಗ್ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *