ಎಡಬಿಡಂಗಿತನ, ರಾಜಕಾರಣ ಮಾಡಿದ್ದು ನಿಮ್ಮದೇ ಸರ್ಕಾರ: ಶೆಟ್ಟರ್ ವಿರುದ್ಧ ಎಚ್‍ಡಿಕೆ ಕಿಡಿ

Public TV
1 Min Read

ಬೆಂಗಳೂರು: ಪಾದರಾಯನಪುರ ಪುಂಡರನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಮಧ್ಯೆ ವಾಗ್ದಾಳಿ ಜೋರಾಗಿದೆ.

ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ”ಜಗದೀಶ್ ಶೆಟ್ಟರ್ ಅವರೇ, ಪಾದರಾಯನಪುರ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡುವ ವಿಷಯದಲ್ಲಿ ಎಡಬಿಡಂಗಿತನ ಮತ್ತು ರಾಜಕಾರಣ ಮಾಡಿದ್ದು ನಿಮ್ಮದೇ ಬಿಜೆಪಿ ಸರ್ಕಾರ ಎಂಬುದು ನಿಮಗೆ ಗೊತ್ತಿಲ್ಲವೇ” ಎಂದು ಪ್ರಶ್ನಿಸಿದ್ದಾರೆ.

ರಾಮನಗರಕ್ಕೆ ಶಿಫ್ಟ್ ಮಾಡಲಾದ ಕೈದಿಗಳ ವಿಚಾರದಲ್ಲಿ ನಾನು ರಾಜಕಾರಣ ಮಾಡುತ್ತಿದ್ದೇನೆ ಎಂದು ಆರೋಪಿಸುವ ನೀವು ಹಿಂದೊಮ್ಮೆ ಮುಖ್ಯಮಂತ್ರಿಯಾಗಿದ್ದವರು. ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದವರಂತೆ ಮಾತನಾಡುವುದನ್ನು ಬಿಟ್ಟು ತೆಪ್ಪಗಿರಿ. ನಾನು ಸಣ್ಣ ರಾಜಕಾರಣ ಮಾಡುತ್ತೇನೆ ಎಂದು ದೂಷಿಸುವ ನಿಮ್ಮ ಸರ್ಕಾರ ಮತ್ತ್ಯಾಕೆ ಯು-ಟರ್ನ್ ತೆಗೆದುಕೊಂಡು ಕೈದಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಿತು? ಮೊದಲೇ ಈ ಕೆಲಸ ಮಾಡಿದ್ದರೆ, ನಿಮ್ಮ ಸರ್ಕಾರಕ್ಕೊಂದು ಮರ್ಯಾದೆ ಇರುತ್ತಿತ್ತು ಎಂದು ಗುಡುಗಿದ್ದಾರೆ.

ರಾಮನಗರ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿ ಬಿಜೆಪಿ ಸರ್ಕಾರ ಸಾಧಿಸಿದ್ದಾದರೂ ಏನನ್ನ? ರೋಗ ನಿಯಂತ್ರಿಸಬೇಕಾದ ಸರ್ಕಾರವೇ ರೋಗ ಹಂಚಿದ್ದು ಸರ್ಕಾರದ ವೈಫಲ್ಯ ಅಲ್ಲದೆ ಮತ್ತೇನು? ನಿಮ್ಮದು ಸಣ್ಣ ರಾಜಕಾರಣ. ನನ್ನದಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಶೆಟ್ಟರ್ ಹೇಳಿದ್ದೇನು?
ಧಾರವಾಡದಲ್ಲಿ ಶುಕ್ರವಾರ ಮಾತನಾಡಿದ್ದ ಸಚಿವ ಜಗದೀಶ್ ಶೆಟ್ಟರ್ ಅವರು, ರಾಮನಗರ ಜೈಲು ಬಿಟ್ಟು ಬೇರೆ ಕಡೆ ಪಾದರಾಯನಪುರ ಆರೋಪಿಗಳನ್ನು ಇಟ್ಟರೆ, ಅಲ್ಲಿ ಕೂಡ ಜನ, ಊರು ಹಾಗೂ ಅಧಿಕಾರಿಗಳು ಇದ್ದೇ ಇರುತ್ತಾರೆ. ಇಡೀ ರಾಜ್ಯದಲ್ಲಿ ರಾಮನಗರ ಒಂದೇ ಇದೆ ಎಂದು ಸೀಮಿತವಾಗಿ ನೋಡಬೇಡಿ. ನೀವು ರಾಜ್ಯ ನಾಯಕರು ಹಾಗೂ ಮಾಜಿ ಸಿಎಂ ಆಗಿದ್ದವರು. ಇಡೀ ರಾಜ್ಯದಲ್ಲಿ ಎಲ್ಲಿಟ್ಟರೆ ಏನಾಗುತ್ತೆ ಎನ್ನುವುದನ್ನ ವಿಚಾರ ಮಾಡಬೇಕು ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *