ಶಿವಮೊಗ್ಗ: ನಗರದಲ್ಲಿ ಎಲ್ಲಿ ನೋಡಿದರೂ ಮಾಜಿ ಸಿಎಂ ಯಡಿಯೂರಪ್ಪ ಅವರ ಕಟ್ಟಡಗಳೇ ಕಾಣಿಸುತ್ತವೆ. ಇಷ್ಟೆಲ್ಲಾ ಆಸ್ತಿ ಮಾಡಿದ್ದಾರಲ್ಲ, ಅವರೇನು ಅಡಿಕೆಗೆ ನೀರು ಕಟ್ಟಿ ಬೆಳೆದು ಆಸ್ತಿ ಮಾಡಿದ್ರಾ ಎಂದು ಸಿಎಂ ಎಚ್‍ಡಿಕೆ ಪ್ರಶ್ನಿಸಿ ಕಿಡಿಕಾರಿದ್ದಾರೆ.
ಉಪಚುನಾವಣೆಯಲ್ಲಿ ಮಧು ಬಂಗಾರಪ್ಪ ಪರ ಮತಯಾಚನೆ ಮಾಡುತ್ತಿರುವ ಸಿಎಂ ಎಚ್‍ಡಿಕೆ ಇಂದು ಸೊರಬ ನಗರದಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಾನು ಆಸ್ತಿ ಮಾಡಲು ಕಾಂಗ್ರೆಸ್ ಬೆಂಬಲ ಪಡೆದು ಸಿಎಂ ಆಗಿಲ್ಲ. ನಾನು ನಿಮಗೋಸ್ಕರ ಬದುಕಿದ್ದೇನೆ ಎಂದು ಹೇಳಿದ ಎಚ್‍ಡಿಕೆ, ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದರು.
ಎಚ್‍ಡಿಕೆ ಸವಾಲು: ನ.6 ರಂದು ಕುಮಾರಸ್ವಾಮಿ ಮನೆಗೆ ಹೋಗುತ್ತಾರೆ. ಸರ್ಕಾರ ಉರುಳುತ್ತದೆ ಎಂದು ಬಿಎಸ್‍ವೈ ಹೇಳಿದ್ದಾರೆ. ಆದರೆ ಅವರ ಕೈಯಿಂದ ನನ್ನನ್ನು ಮನೆಗೆ ಕಳುಹಿಸಲು ಆಗಲ್ಲ. ಅದು ದೇವರ ಕೈಯಿಂದ ಮಾತ್ರ ಆಗುತ್ತದೆ. ಸರ್ಕಾರ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡರು ವರ್ಗಾವಣೆ ದಂಧೆ ಬಗ್ಗೆ ಸಾಕ್ಷಿ ನೀಡಿ ಸಾಬೀತು ಪಡಿಸಿದರೆ ನಾನು ಒಂದು ಕ್ಷಣ ಕೂಡ ಸಿಎಂ ಸ್ಥಾನದಲ್ಲಿ ಇರುವುದಿಲ್ಲ ಎಂದರು. ಅಲ್ಲದೇ ಒಂದೇ ವೇದಿಕೆಯಲ್ಲಿ ವರ್ಗಾವಣೆ ದಂಧೆ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಆಗಮಿಸುವಂತೆ ಬಿಎಸ್‍ವೈಗೆ ಸವಾಲು ಎಸೆದರು.
ಮಧು ನನ್ನ ಸಹೋದರ: ಬಂಗಾರಪ್ಪ ಅವರು ನನ್ನನ್ನು ಸ್ವಂತ ಮಗನಂತೆ ಸಿಎಂ ಮಾಡಲು ಕನಸು ಕಂಡಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಮಧು ಸೋತಿದ್ದು ನನಗೆ ನೋವು ತಂದಿದೆ. ಮಧು ಏನು ತಪ್ಪು ಮಾಡಿದ್ದ. ರಕ್ತ ಹಂಚಿಕೊಂಡು ಹುಟ್ಟದಿದ್ದರೂ ಮಧು ಬಂಗಾರಪ್ಪ ನನ್ನ ಸಹೋದರ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv