ಲೂಟಿ‌ ಮಾಡೋರಿಗೆ ನಮ್ಮ ಸರ್ಕಾರ ಅಂತ ಪ್ರೂವ್‌ ಮಾಡಿದ್ದಾರೆ – ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತೆ ಎಂದ HDK

Public TV
2 Min Read

– ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆಯುವ ಸರ್ಕಾರದ ನಡೆಗೆ ಮಾಜಿ ಸಿಎಂ ಖಂಡನೆ
– ಸಿಎಂ ವಿರುದ್ಧವೂ ವಾಗ್ದಾಳಿ

ರಾಮನಗರ: ಈ ಸರ್ಕಾರದಲ್ಲಿ ಬಡವರಿಗೆ ರಕ್ಷಣೆ ಇಲ್ಲ, ಲೂಟಿ‌ ಮಾಡುವವರಿಗೆ, ಕೊಳ್ಳೆ ಒಡೆದು ಬದುಕುವವರಿಗೆ ನಮ್ಮ ಸರ್ಕಾರ ಎಂಬುದನ್ನ ನಿರೂಪಿಸಿದ್ದಾರೆ. ಈ ನಡವಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತೆ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಕಿಡಿ ಕಾರಿದ್ದಾರೆ.

ಡಿಕೆಶಿ ವಿರುದ್ಧದ ಸಿಬಿಐ ಕೇಸ್ (CBI Case) ವಾಪಸ್ ಪಡೆಯುವ ಸರ್ಕಾರದ ನಡೆಗೆ ಕುಮಾರಸ್ವಾಮಿ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ವಕೀಲರಾಗಿ, ವಕೀಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ನಿನ್ನೆ ಅವರ ನೇತೃತ್ವದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಸರಿಯಲ್ಲ. ಹಲವಾರು ಸುಪ್ರೀಂ ಕೋರ್ಟ್ (Supreme Court) ತೀರ್ಪುಗಳು ನಮ್ಮ ಕಣ್ಣಮುಂದೆ ಇದೆ. ಈಗಾಗಲೇ ಇದೇ ವಿಷಯವಾಗಿ ಎರಡು ಬಾರಿ ಹೈಕೋರ್ಟ್ ನಲ್ಲಿ ಚರ್ಚೆ ಆಗಿದೆ. ಎರಡು ಬಾರಿ ಅರ್ಜಿ ವಜಾಕ್ಕೆ ಮನವಿ ಸಲ್ಲಿಸಿದ್ರೂ ಕೋರ್ಟ್‌ನಲ್ಲಿ ತಿರಸ್ಕಾರ ಆಗಿದೆ. ಸೂಕ್ಷ್ಮ ವಿಚಾರ ನ್ಯಾಯಾಲಯದ ಮುಂದೆ ಇದ್ದಾಗ ಈ ರೀತಿಯ ಸರ್ಕಾರ ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದು ತಪ್ಪು. ಕಾನೂನನ್ನ ಧಿಕ್ಕರಿಸಿ, ಕಾನೂನಿಗಿಂತ ನಾವೇ ದೊಡ್ಡವರು ಎಂಬುದನ್ನ ಪ್ರದರ್ಶನ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬಡವರಿಗೆ ರಕ್ಷಣೆ ಇಲ್ಲ, ಲೂಟಿ‌ ಮಾಡುವವರಿಗೆ, ಕೊಳ್ಳೆ ಒಡೆದು ಬದುಕುವವರಿಗೆ ನಮ್ಮ ಸರ್ಕಾರ ಎಂಬುದನ್ನ ನಿರೂಪಿಸಿದ್ದಾರೆ. ಡಿಸಿಎಂ ಎಂತಹಾ ದೊಡ್ಡತನ ತೋರಿಸಿದ್ದಾರೆ ಅಂದ್ರೆ, ಈ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗುತ್ತೆ. ಪಾಪ ನಿನ್ನೆ ದಿನ ಡಿಸಿಎಂ ಸಂಪುಟ ಸಭೆಗೂ ಹೋಗಿಲ್ಲ. ಕಳೆದ 3 ದಿನಗಳ ಹಿಂದೆ ಸೀನಿಯರ್ ಅಡ್ವೋಕೇಟ್‌ಗಳನ್ನ ಕರೆದು ಸಭೆಮಾಡಿ ಇದರಿಂದ ಯಾವ ರೀತಿ ರಕ್ಷಣೆ ಪಡೆಯಬೇಕು ಅಂತ ಚರ್ಚೆ ಮಾಡಿದ್ದಾರೆ. ನಮಗೆ ಎಲ್ಲಾ ಮಾಹಿತಿ ಇದೆ. ಮೊನ್ನೆಯೇ ಈ ವಿಚಾರ ಗಮನಕ್ಕೆ ಬಂತು. ಸರ್ಕಾರದ ನಿನ್ನೆಯ ತೀರ್ಮಾನ, ಈ ನಡವಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತೆ. ಈ ವಿಚಾರ ಮುಂದಿನ ಸದನದಲ್ಲಿ ಚರ್ಚೆ ಮಾಡ್ತೀನಿ ಎಂದು ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.

ಸರ್ಕಾರಕ್ಕೆ ಡಿಕೆಶಿ (DK Shivakumar) ಒತ್ತಡ ಹಾಕಿದ್ರಾ ಪ್ರಶ್ನೆಗೆ ಉತ್ತರಿಸಿ, ಇಲ್ಲಿ ಒತ್ತಡದ ಪ್ರಶ್ನೆಯೇ ಇಲ್ಲ. ಸರ್ಕಾರ ಇರೋದು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡೋದಕ್ಕೆ. ತಿಳಿವಳಿಕೆ ಇರುವವರೇ ಇಂತಹ ನಿರ್ಣಯ ಮಾಡಿರೋದು ಸರ್ಕಾರಕ್ಕೆ ಛೀಮಾರಿ ಹಾಕಿದಂತೆ. ಒಂದು ಬಾರಿ ಆದೇಶ ಮಾಡಿದ ಮೇಲೆ ಬದಲಾವಣೆ ಮಾಡಲು ಆಗಲ್ಲ. ಸಿಬಿಐ ನಿಂದ ವಾಪಸ್ಸ್ ತಗೆದು ಲೋಕಾಯುಕ್ತ ಅಥವಾ ಸ್ಥಳೀಯ ಪೊಲೀಸರಿಂದ ಇದನ್ನ ತನಿಖೆ ಮಾಡಲು ಆಗುತ್ತಾ? ಲೋಕಾಯುಕ್ತ ಅಥವಾ ಪೊಲೀಸರು ಇದನ್ನ ಮಾಡಲು ಸಾಧ್ಯವೇ? ಹಿಂದಿನ ಸರ್ಕಾರ ಸ್ಪೀಕರ್ ಅನುಮತಿ ಪಡೆದಿರಲಿಲ್ಲ ಎನ್ನುವುದಾದರೇ, ಇವರು ಸ್ಪೀಕರ್ ನಿಂದ ಅನುಮತಿ ಪಡೆದಿದ್ದಾರಾ? ಇದೆಲ್ಲಾ ಕೇವಲ ಸಬೂಬುಗಳು ಅಷ್ಟೇ. ಈಗಾಗಲೇ ತನಿಖೆ ಮುಂದುವರಿಸಿ ಅಂತಾ ಕೋರ್ಟ್ ಆದೇಶ ಆಗಿದೆ. ಈಗ ಸ್ಪೀಕರ್ ಅನುಮತಿ ಪಡೆದ್ರೂ ಕೇಸ್ ವಾಪಸ್ಸ್ ಪಡೆಯಲು ಆಗುತ್ತಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದೇ ಸಿಎಂ ಸಿದ್ದರಾಮಯ್ಯ ಅವರು ಲೋಕಾಯುಕ್ತ ರದ್ದು ಮಾಡಿ, ಅಕ್ರಮ ಮುಚ್ಚಿಹಾಕಿದ್ರು. ಇದರಲ್ಲಿ ಸಿದ್ದರಾಮಯ್ಯ ನಿಪುಣರು. ಈ ಬಗ್ಗೆ ಅವರಿಗೆ ಬಹಳ ಅನುಭವ ಇದೆ. ಹಾಗಾಗಿ ಕಾನೂನು ವ್ಯವಸ್ಥೆಯಲ್ಲಿ ಹೊಸ ಹೆಜ್ಜೆಹಾಕಲು ಹೊರಟಿದ್ದಾರೆ ಎಂದು ಸಿಎಂ ವಿರುದ್ಧವೂ ಕಿಡಿ ಕಾರಿದ್ದಾರೆ.

Share This Article