ಕೊರೊನಾ ಲಾಕ್‍ಡೌನ್ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ- ಎಚ್‍ಡಿಕೆ ಆರೋಪ

Public TV
1 Min Read

– ಸಿಎಂ ಕಚೇರಿಯಲ್ಲಿ ಸಲಹೆಗಾರರಿಗೆ ನೀಡುವ ಹಣವನ್ನ ಇಡೀ ದೇಶಕ್ಕೆ ಹಂಚಬಹುದು

ಕೋಲಾರ: ಸರ್ಕಾರಕ್ಕೆ ಲಾಕ್‍ಡೌನ್ ಮೇಲಿರುವ ಕಾಳಜಿ, ರೈತರ ಮೇಲೆ ಇಲ್ಲ. ಜನ ಸಾಮಾನ್ಯರ ನೋವಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೋಲಾರದಲ್ಲಿ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರದ ಕಿಟ್‍ಗಳನ್ನು ವಿತರಣೆ ಮಾಡಿದರು. ಮುಳಬಾಗಿಲಿನ ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಅವರು ತಾಲೂಕಿನಲ್ಲಿ 46 ಸಾವಿರ ಆಹಾರದ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮುಂಬೈನಿಂದ ಮಂಡ್ಯಗೆ ಶವ ತಂದ ವಿಚಾರವಾಗಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಲು ಅವಕಾಶವಿಲ್ಲ. ಸತ್ತ ವ್ಯಕ್ತಿಯ ಕೊರೊನಾ ತಪಾಸಣೆ ಮಾಡದೆ ಹೇಗೆ ಮಂಡ್ಯಗೆ ತಂದರು? ಮಹಾರಾಷ್ಟ್ರದಿಂದ ಇಲ್ಲಿಗೆ ತರಲು ಅವಕಾಶ ಕೊಟ್ಟವರು ಯಾರು? ಮಂಡ್ಯದಲ್ಲಿ 8 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವೆಲ್ಲಾ ಜಿಲ್ಲಾಧಿಕಾರಿಗಳ ಗಮನಕ್ಕೆ ಇರಲಿಲ್ವಾ ಎಂದು ಪ್ರಶ್ನಿಸಿದರು.

ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು. ಕೆಲ ಜನರು ಮುಂಬೈನಿಂದ ಬಂದಿದ್ದಾರೆ. ಅವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

ಮೇ 18ರೊಳಗೆ ಇಡೀ ದೇಶದಲ್ಲಿ 38 ಸಾವಿರ ಜನ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಜನರ ಜೀವದ ಜೊತೆ ಚೆಲ್ಲಾಟವಾಡದೆ ಸರ್ಕಾರ ತೀರ್ಮಾನ ಮಾಡಬೇಕು. ಈಗಾಗಲೇ ಕೆಲ ಚಟುವಟಿಕೆಗಳಿಗೆ ರಿಲ್ಯಾಕ್ಸ್ ನೀಡಲಾಗಿದೆ. ಮುಂದೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರವು ದುಂದುವೆಚ್ಚ ನಿಲ್ಲಿಸಬೇಕು. ನನ್ನ ಆಡಳಿತದ ಅವಧಿಯಲ್ಲಿ ಬಿಡುಗಡೆ ಮಾಡಿದ ಹಣದಲ್ಲಿ ಈಗಲೂ ಕೆಲಸ ನಡೆಯುತ್ತಿದೆ. ಸಿಎಂ ಕಚೇರಿಯಲ್ಲಿ ದುಂದು ವೆಚ್ಚ ನಡೆಯುತ್ತಿದೆ. ಸಿಎಂ ಕಚೇರಿಯಲ್ಲಿ ಸಲಹೆಗಾರರಿಗೆ ನೀಡುವ ಹಣವನ್ನು ಇಡೀ ದೇಶಕ್ಕೆ ಹಂಚಬಹುದಾಗಿದೆ. ಬೇರೆ ರಾಜ್ಯಗಳಲ್ಲಿ ಸರ್ಕಾರ ನೀಡುತ್ತಿರುವ ಪ್ಯಾಕೇಜ್‍ಗಳ ಮಾಹಿತಿ ತರಿಸಿಕೊಳ್ಳಲಿ, 9 ಸಾವಿರ ಕೋಟಿ ರೂ.ವನ್ನು ಎಫ್.ಡಿನಲ್ಲಿ ಸರ್ಕಾರ ಇಟ್ಟುಕೊಂಡಿದೆ. ಅದನ್ನು ಉಪಯೋಗಿಸಿಕೊಳ್ಳಲಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *