ಬಿಜೆಪಿ ಬಡವರ ಪಕ್ಷವಲ್ಲ: ಹೆಚ್‍ಡಿಕೆ

Public TV
5 Min Read

ಬೆಂಗಳೂರು: ಸತತ 13 ದಿನಗಳಿಂದ ತೈಲ ಬೆಲೆ ಏರಿಕೆ ಆಗುತ್ತಿರುವುದರ ವಿರುದ್ಧ ಸರಣಿ ಟ್ವೀಟ್ ಮಾಡಿ, ಕೇಂದ್ರ, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು, ಬಿಜೆಪಿ ಬಡವರ ಪಕ್ಷವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಹಲಾಲ್ ಹಾಲಾಹಲದ ನಡುವೆಯೇ ಇಂದು ಬೆಳಗ್ಗೆ ಬರಸಿಡಿಲಿನಂತೆ ಅಪ್ಪಳಿಸಿದ ಸುದ್ದಿ. ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ 13 ದಿನಗಳಲ್ಲಿ 8 ರೂ. ಜಿಗಿತ. ಇದಪ್ಪಾ ಬಹುಜನ ಹಿತಾಯ, ಬಹುಜನ ಸುಖಾಯ ಎಂದು ಭಾಷಣ ಬಿಗಿಯುವ ಬಿಜೆಪಿ ಆಡಳಿತದಲ್ಲಿ ಇಂಡಿಯಾ ಶೈನಿಂಗ್ ಎಂದು ಲೇವಡಿ ಮಾಡಿದ್ದಾರೆ.

13 ದಿನದಿಂದ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ. ಎರಡೂ ತೈಲಗಳ ಬೆಲೆ 8 ರೂ. ಹೆಚ್ಚಳ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 108.99 ರೂ. (ಇಂದಿನ ಹೆಚ್ಚಳ: 88 ಪೈಸೆ) ಡೀಸೆಲ್ ಬೆಲೆ ಲೀಟರಿಗೆ 92.83 ರೂ.(ಇಂದಿನ ಹೆಚ್ಚಳ: 78 ಪೈಸೆ) ಜಿಗಿದಿದೆ. ಖಜಾನೆ ಭರ್ತಿಗೆ ಷೇರು ಸೂಚ್ಯಂಕವನ್ನು ಕುಣಿಸಿದಂತೆ, ಬೆಲೆ ಸೂಚ್ಯಂಕದ ಕರಡಿ ಕುಣಿತವೂ ಭರ್ಜರಿ.

2018ರಲ್ಲಿ ನಾನು ಸಿಎಂ ಆಗಿದ್ದಾಗ ಸಾಲ ಮನ್ನಾಕ್ಕಾಗಿ ಪೆಟ್ರೋಲ್ ಲೀಟರಿಗೆ 1.12 ಪೈಸೆ, ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರಿಗೆ 1.14 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿ ನಾಯಕರು ಕೂಗಾಡಿ ಗಲಾಟೆ ಎಬ್ಬಿಸಿದ್ದರು. ಬೆಲೆ ಹೆಚ್ಚಳದ ಈ ಹಣ ರೈತರಿಗೆ ಹೋಗಿಬಿಡುತ್ತದಲ್ಲ ಎಂದು ಅವರ ಹೊಟ್ಟೆ ಉರಿದುಹೋಯಿತು. ಇದನ್ನೂ ಓದಿ: ದೃಢಸಂಕಲ್ಪ, ಜಾಣ್ಮೆ, ತಾಳ್ಮೆ ಇವು ಯಶಸ್ಸಿನ ಸೂತ್ರಗಳು: ಆನಂದ್ ಮಹೀಂದ್ರಾ

ಹಾದಿಬೀದಿಯಲ್ಲಿ ಖಾಲಿ ಸಿಲಿಂಡರ್‌ಗಳನ್ನು ಹೊತ್ತ ಬಿಜೆಪಿಗರು ಈಗೇಕೆ ಮೌನಕ್ಕೆ ಶರಣಗಾಗಿದ್ದಾರೆ? ಬೆಲೆ ಏರಿಕೆಯಿಂದ ಬಡವರ ಹೊಟ್ಟೆ ಉರಿದರೆ ನಿಮಗೆ ಖುಷಿಯಾ. ಬನ್ನಿ, ಬೀದಿಗೆ ಬಂದು ಪ್ರತಿಭಟನೆ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಎಂದರು. ಇದನ್ನೂ ಓದಿ: ಪಾಕಿಸ್ತಾದ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ದಾಳಿ

ಸಿಮೆಂಟ್, ಕಬ್ಬಿಣ, ಆಹಾರ ಪದಾರ್ಥ ಸೇರಿ ಸಾಮಾನ್ಯ ವ್ಯಕ್ತಿ ಬಳಸುವ ಪ್ರತಿ ವಸ್ತುವಿನ ಬೆಲೆ ನಿತ್ಯವೂ ಜಿಗಿಯುತ್ತಿದೆ. ಶ್ರೀಸಾಮಾನ್ಯನು ಮನೆ ಕಟ್ಟುವ ಕನಸು ಇನ್ನು ಬರೀ ಕನಸೇ. ಅವನ ಜೇಬು ಖಾಲಿಯಾಗುತ್ತಿದೆ, ಕೆಲವರ ಜೇಬು ತುಂಬುತ್ತಿದೆ. ಬಿಜೆಪಿ ಭಾರತದಲ್ಲಿ ಉದ್ಯಮಿಗಳು ಜಗತ್ತಿನ ಟಾಪ್ ಶ್ರೀಮಂತರಾಗುತ್ತಿದ್ದಾರೆ.

ಹಿಜಾಬ್, ಕೇಸರಿ ಶಾಲು, ಟಿಪ್ಪು ಪಠ್ಯ, ಮುಸ್ಲಿಂ ವರ್ತಕರಿಗೆ ನಿಷೇಧ, ಹಲಾಲ್ ಕಟ್ ಬಗ್ಗೆ ಅಬ್ಬರಿಸಿ ಬೊಬ್ಬಿರಿಯುವ ಶ್ರೀಮಂತರ ಪಕ್ಷ ಬಿಜೆಪಿಯು ಬೆಲೆ ಏರಿಕೆ ಬಗ್ಗೆ ಮಾತ್ರ ಮೌನವಾಗಿದೆ. ರಾಜ್ಯ ಸರ್ಕಾರವೂ ಮೌನ. ಮುಖ್ಯಮಂತ್ರಿಗಳೂ ಮೌನ. ಮೌನಂ ಶರಣಂ ಗಚ್ಛಾಮಿ. ಮೌನಿ ಪಕ್ಷ. ಮೌನಿ ಸರ್ಕಾರ. ಮೌನಿ ಮುಖ್ಯಮಂತ್ರಿ.

ಡಾ. ಮನಮೋಹನ್ ಸಿಂಗ್ ಅವರನ್ನು ಮೌನಿ ಪ್ರಧಾನಿ ಎಂದ ಇವರ ಅಬ್ಬರ ಎಲ್ಲಿ ಉಡುಗಿ ಹೋಗಿದೆ. ದನಿಯೆತ್ತಿ ಬೆಲೆ ಏರಿಕೆ ವಿರುದ್ಧ ಇದು ನನ್ನ ಆಗ್ರಹ ಎಂದರು.

ಬೆಲೆ ಏರಿಕೆ ಬಗ್ಗೆ ಜನರ ಆಕ್ರೋಶ ಎಲ್ಲಿ ಆಸ್ಫೋಟಗೊಂಡು ಬಿಜೆಪಿ ಬುಡಕ್ಕೆಲ್ಲಿ ಬೆಂಕಿ ಬೀಳುತ್ತದೋ ಎಂಬ ಭಯದಿಂದ ಆ ಮುಗ್ಧಜನರ ಮನಸ್ಸನ್ನು ಸೂಕ್ಷ್ಮ ವಿಷಯಗಳ ಕಡೆ ಹೊರಳುವಂತೆ ಮಾಡಲಾಗಿದೆ. 150 ಸೀಟಿನ ರೋಡ್ ಮ್ಯಾಪ್ ಎಲ್ಲಿ ಮಣ್ಣುಪಾಲಾಗುತ್ತದೋ? ಎಂದು ಹಿಂದುತ್ವದ ವಿನಾಶಕ್ಕೆ ಹಿಂಸಾಚಾರದ ಶಂಖ ಊದಲಾಗಿದೆ.

ಘನವೇತ್ತ ಮಾಜಿ ಸಿಎಂ ಮಾಜಿ ಕೇಂದ್ರಮಂತ್ರಿಗಳೂ ಡಿ.ವಿ.ಸದಾನಂದಗೌಡರು, ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರ್ಕಾರ ಕಾರಣ ಎಂದಿದ್ದಾರೆ. 8 ವರ್ಷವಾದರೂ ಯುಪಿಎ ಮಾಡಿದ ತಪ್ಪು ಸರಿ ಮಾಡಲಿಲ್ಲ, ಏಕೆ ಅಡುಗೆ ಮನೆಗಳಲ್ಲಿ ತಾಯಂದಿರು, ಬೆಲೆ ಏರಿಕೆ ಬೆಂಕಿಯಲ್ಲಿ ಬೇಯುತ್ತಿದ್ದರೆ ನಿಮಗೆ ರಾಜಕೀಯ ಮುಖ್ಯವಾಗಿದೆ. ನಾಚಿಕೆಯಾಗಬೇಕು.

ಬಿಜೆಪಿ ಎಂದರೆ ಭಾರತೀಯ ಜನತಾ ಪಕ್ಷವಲ್ಲ, ಬಡವರ ರಕ್ತಹೀರಿ ಸಿರಿವಂತರ ಖಜಾನೆ ಭರ್ತಿ ಮಾಡುವ ಬಲ್ಲಿದ ಜನರ ಪಕ್ಷ. ಬೆಲೆ ಶೂಲದಿಂದ ಬಡಜನರನ್ನು ಬರ್ಬಾದ್ ಮಾಡುತ್ತಿರುವ ಪಕ್ಷ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಬಡವರ ಪಕ್ಷವಲ್ಲ ಬಿಜೆಪಿ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *