ಜಿಟಿಡಿಗೆ ಫ್ಯೂಸ್ ಹೋಗಿದೆ, ಇನ್ನೆಲ್ಲಿ ಶಾಕ್ ಹೊಡೆಯುತ್ತೆ- ಎಚ್‍ಡಿಕೆ ವ್ಯಂಗ್ಯ

Public TV
2 Min Read

ಬೆಂಗಳೂರು: ಮಾಜಿ ಸಚಿವ, ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಜೆಡಿಎಸ್ ಪಕ್ಷವನ್ನು ತೊರೆಯಲಿದ್ದಾರೆ ಎಂಬ ಬಗ್ಗೆ ವ್ಯಂಗ್ಯವಾಡಿರುವ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು, ಜಿಟಿಡಿ ಅವರಿಗೆ ಫ್ಯೂಸ್ ಹೋಗಿದೆ, ಇನ್ನೆಲ್ಲಿ ಶಾಕ್ ಹೊಡೆಯುತ್ತದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಜೆಡಿಎಸ್‍ಗೆ ಮತ್ತೊಂದು ಶಾಕ್. ಜಿಟಿ ದೇವೇಗೌಡರು ಜೆಡಿಎಸ್ ಬಿಡುತ್ತಾರೆ ಎಂದು ವರದಿ ಮಾಡಿದ್ದವು. ಆದರೆ ಅದು ಶಾಕ್ ಹೊಡೆಯುವುದಿಲ್ಲ. ಈಗಾಗಲೇ ಫ್ಯೂಸ್ ಕಿತ್ತು ಹೋಗಿದೆ. ಎಂಎಲ್‍ಸಿ ಪುಟ್ಟಣ್ಣ ಕೂಡ 3 ವರ್ಷದ ಹಿಂದೆ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗಿ ಟೋಪಿ ಹಾಕಿದ್ದಾರೆ. ಇನ್ನೂ ಆ ಶಾಕ್ ಈಗ ಹೇಗೆ ಹೊಡೆಯುತ್ತೆ. ಅಲ್ಲಿಯೂ ಕರೆಂಟ್ ಇಲ್ಲ. ಇದೆಲ್ಲಾ ಮುಗಿದ ಕಥೆಗಳು ಅಷ್ಟೆ. ಮತ್ತೆ ಶಾಕ್ ಹೊಡೆಯುವ ಪ್ರಶ್ನೆಯೇ ಇಲ್ಲ ಎಂದರು.

ಪರಿಷತ್ ಸದಸ್ಯರ ಜೊತೆ ಸಭೆ ನಡೆಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹೊರಟ್ಟಿಯವರದ್ದು ನನ್ನ ಸಂಬಂಧವೇ ಬೇರೆ ರೀತಿಯಾಗಿದ್ದು, ಹೊರಟ್ಟಿ ಅವರು ಇವತ್ತಿಗೂ ನನ್ನ ಅಣ್ಣನಂತಿದ್ದಾರೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನನಗೆ ಎಂಎಲ್‍ಸಿ, ಎಂಎಲ್‍ಎ ಗಳಲ್ಲಿ ಯಾವುದೇ ಭೇದವಿಲ್ಲ ಎಂದರು.

ರಾಜ್ಯದಲ್ಲಿ ಅನೇಕ ದಿನಗಳಿಂದ ರಾಜಕೀಯ ಅಸ್ಥಿರತೆ ಇತ್ತು. ಕೆಲ ಶಾಸಕರನ್ನು ಸ್ಪೀಕರ್ ಅನರ್ಹ ಮಾಡಿದ್ದರು. ಇಂದು ನ್ಯಾಯಾಲಯ ತೀರ್ಪು ನೀಡಿದ್ದು, ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಇಂದಿನ ತೀರ್ಪಿನ ಬಗ್ಗೆ ಅನೇಕ ವಿಚಾರ ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ. ಸ್ಪೀಕರ್ ಅವರ ನಿರ್ಧಾರವನ್ನು ಕೋರ್ಟ್ ಎತ್ತಿಹಿಡಿದೆ. ಸ್ಪೀಕರ್ ಅವರು ಮತ್ತೆ ಸ್ಪರ್ಧೆ ಮಾಡಬಾರದು ಎಂದು ಹೇಳಿದ್ದರು. ಆದರೆ ಅದನ್ನು ನ್ಯಾಯಾಲಯ ಸಡಿಲಗೊಳಿಸಿ, ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಕೊಟ್ಟಿದೆ. ಈ ಪ್ರಕರಣ ನಾನು ಹೊಡೆದ ಹಾಗೆ ಮಾಡಿ ನಾನು ಅಳೋ ಹಾಗೇ ಮಾಡ್ತೀನಿ ಎಂಬಂತಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಸತ್ವ ಇಲ್ಲ ಎಂದರು.

ಪಕ್ಷಾಂತರ ಕಾಯ್ದೆ ರದ್ದು ಮಾಡಿ: ಸುಮ್ಮನೆ ಶಾಸಕರಿಗೆ ಭಯ ಬೀಳಿಸುಲು ಪಕ್ಷಾಂತರ ನಿಷೇಧ ಕಾಯ್ದೆ ಏಕೆ ಬೇಕು? ಸುಮ್ಮನೆ ಎಲ್ಲಿರಿಗೂ ಮುಕ್ತವಾಗಿ ಅವಕಾಶ ನೀಡುವುದು ಒಳ್ಳೆಯದು. ಈ ಕಾಯ್ದೆ ತಂದ ಉದ್ದೇಶ ಸರಿಯಾಗಿಲ್ಲ. ಕೇವಲ ಕಾನೂನು ರಚನೆ ಮಾಡಿ ಅದು ಸರಿಯಾಗಿ ಅನುಷ್ಠಾನ ಆಗಿಲ್ಲ ಎಂದರೆ ಹೇಗೆ? ಸದ್ಯದ ಸ್ಥಿತಿಯಲ್ಲಿ ನಾವು ಅನಿವಾರ್ಯವಾಗಿ ನ್ಯಾಯಾಲಯದ ತೀರ್ಪು ಸ್ವಾಗತ ಮಾಡಲೇಬೇಕು. ಈ ಕಾನೂನು ವ್ಯವಸ್ಥೆಗೆ ಅರ್ಥವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ವಿರುದ್ಧ ಮಾಡಿದ್ದ ಆರೋಪಗಳಿಗೆ ತೀರುಗೇಟು ನೀಡಿ 14 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಈಗಾಗಲೇ ಚರ್ಚೆ ನಡೆದಿದ್ದು, ಅಭ್ಯರ್ಥಿಗಳನ್ನು ಅಂತಿಮ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. ಅಲ್ಲದೇ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಾಂಗ್ರೆಸ್ ಅವರು ರಾಜು ಕಾಗೆ ಅವರನ್ನು ಕರೆದುಕೊಂಡು ಬಂದಿದ್ದಾರೆ. ಆದರೆ ನಾವು ಯಾರೊಂದಿಗೂ ಕೈ ಜೋಡಿಸಿದೇ ಚುನಾವಣೆಯಲ್ಲಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿ ನಮಗೆ ಸಮಾನ ಶತ್ರುಗಳು. ಜೆಡಿಎಸ್ ಅನ್ನು ಅಷ್ಟು ಸುಲಭವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದರು. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ನಮ್ಮ ಅವಶ್ಯಕತೆ ಇದ್ದರೆ ಬೆಂಬಲ ಕೊಡುತ್ತೇವೆ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *