ಕಾಂಗ್ರೆಸ್ ಪಕ್ಷ ಬಿಜೆಪಿಯ ಬಿ ಟೀಮೋ ಅಥವಾ ಸಿ ಟೀಮೋ?: ಹೆಚ್‍ಡಿಕೆ

Public TV
4 Min Read

ಬೆಂಗಳೂರು: ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದು ಕುಹಕ ಆಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈಗ ಬಿಜೆಪಿಯ ಬಿ – ಟೀಮ್ ಹಾಗೂ ಸಿ – ಟೀಮ್ ಯಾವ ಪಕ್ಷ ಎನ್ನುವುದು ಜನರಿಗೆ ಈಗ ಚೆನ್ನಾಗಿ ಅರ್ಥವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇವನಹಳ್ಳಿಯಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ರಮೇಶ್ ಗೌಡ ಅವರು ನಾಮಪತ್ರ ಸಲ್ಲಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಜವಾದ ಎ ಟೀಮ್, ಬಿ ಟೀಮ್ ಮತ್ತು ಸಿ ಟೀಮ್ ಯಾವುದು ಎನ್ನುವುದು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಗೊತ್ತಾಗುತ್ತದೆ. ಹಾಸನದಲ್ಲಿ ತಂದೆ (ಎ.ಮಂಜು) ಬಿಜೆಪಿ ಅಭ್ಯರ್ಥಿ. ಕೊಡಗಿನಲ್ಲಿ ಅವರ ಪುತ್ರನೇ ಕಾಂಗ್ರೆಸ್ ಪಕ್ಷದ ಉಮೇದುವಾರ. ಬಿಜೆಪಿ ಸರ್ಕಾರದಲ್ಲಿ ಸಚಿವರಿಗೆ ಪಿಎ ಆಗಿದ್ದ ವ್ಯಕ್ತಿ ಈಗ ಮಂಡ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ. ಇದು ಏನನ್ನು ಸೂಚಿಸುತ್ತದೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಕುರುಡು ಕುದುರೆಗಳಂತೆ ಕಣ್ಣಿಗೆ ಪಟ್ಟಿ ಕಟ್ಕೊಂಡು ರಾಜಕಾರಣ ಮಾಡ್ತಿವೆ: ಶ್ರೀರಾಮುಲು

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಮುಖಂಡನನ್ನು ಬಿಜೆಪಿಗೆ ಕಳುಹಿಸಿ ಅಭ್ಯರ್ಥಿ ಮಾಡಿತ್ತು. ಈಗ ಅದೇ ಬಿಜೆಪಿಯು ತನ್ನ ನಾಯಕನ ಮಗನನ್ನು ಕಾಂಗ್ರೆಸ್ ಪಕ್ಷಕ್ಕೆ ಕಳುಹಿಸಿ ಕೊಡಗಿನ ಅಭ್ಯರ್ಥಿ ಮಾಡಿದೆ. ಇದು ರಾಷ್ಟ್ರೀಯ ಪಕ್ಷಗಳ ಅಡ್ಜೆಸ್‍ಮೆಂಟ್ ರಾಜಕೀಯ. ಈಗ ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ ಕಳಚಿ ಬಿದ್ದಿದೆ. ಜನರಿಗೂ ಆ ಪಕ್ಷದ ಅಸಲಿ ಸ್ವರೂಪ ಗೊತ್ತಾಗಿದೆ. ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಈಗ ಏನು ಹೇಳುತ್ತಾರೆ? ಯಾವ ನಾಲಗೆಯಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ನಾವು ಏಳು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೇವೆ. ಆ ಪೈಕಿ ಕೊನೆಪಕ್ಷ ಆರು ಕಡೆಯಾದರೂ ಗೆಲ್ಲುತ್ತೇವೆ. ಈಗ ನಮ್ಮ ಪಕ್ಷ ಕಷ್ಟದ ಪರಿಸ್ಥಿತಿಯಲ್ಲಿದೆ. ಹೀಗಾಗಿ ನಾವು ಕಣಕ್ಕಿಳಿದಿರುವ ಕಡೆ ಗೆಲ್ಲಲೇಬೇಕು. ಅದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.

ಬ್ರೈನ್ ವಾಶ್ ಮಾಡುತ್ತಿದ್ದಾರೆ:
ಮೈತ್ರಿ ಸರ್ಕಾರವನ್ನು ಪತನ ಮಾಡಿದ ನಂತರ ನಮ್ಮ ಪಕ್ಷವನ್ನು ಮುಗಿಸಲು ಕೆಲವರು ಹೊಂಚು ಹಾಕಿ ಕೂತಿದ್ದಾರೆ. ನಮ್ಮ ನಾಯಕರ ಬ್ರೈನ್ ವಾಶ್ ಮಾಡಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಷತ್ ಚುನಾವಣೆ ಬಂದಿದೆ. ನಾವು ಕಾರ್ಯಕರ್ತರನ್ನು ನಂಬಿ ಹೋರಾಟ ಮಾಡುತ್ತಿದ್ದೇವೆ. ಪಕ್ಷದಿಂದ ಬೆಳೆದವರು ಪಕ್ಷದ ಬೆನ್ನು ಇರಿದರು. ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದರು. ಕಾಂಗ್ರೆಸ್ ಪಕ್ಷದ ನಾಯಕರೇ ಕುತಂತ್ರ ನಡೆಸಿ ಮಾಜಿ ಪ್ರಧಾನಿಗಳ ಸೋಲಿಗೆ ಕಾರಣರಾದರು. ತಡರಾತ್ರಿ 1.30ಕ್ಕೆ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗಿದೆ. ನಮ್ಮ ಪಕ್ಷದ ಶಕ್ತಿಗೆ ತಕ್ಕಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಬಿಜೆಪಿಗೆ ಅನುಕೂಲ ಮಾಡಿಕೊಡಲು ದೇವೇಗೌಡರನ್ನು ಕಾಂಗ್ರೆಸ್ ನಾಯಕರು ತುಮಕೂರಿನಲ್ಲಿ ಸೋಲಿಸಿದರು. ಯಾವ ಕುತಂತ್ರಕ್ಕೆ ಅಂದು ನಾವು ಬಲಿಯಾದೇವೂ ಅದನ್ನೆ ಈಗ ತೋರಿಸುತ್ತೇವೆ. ಪರಿಷತ್ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ನೇರ ಸವಾಲು ಹಾಕಿದರು. ಇದನ್ನೂ ಓದಿ:   ಕಾಂಗ್ರೆಸ್ ಪಕ್ಷ ಬರ್ಬಾದ್ ಆಗಿ ಹೋಗಿದೆ: ಅಶ್ವತ್ಥ್‌ ನಾರಾಯಣ್

ಕೂಡಲೇ ರೈತರಿಗೆ ನರವಾಗಬೇಕು:
ಈಗಾಗಲೇ ಸತತ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಅನ್ನು ಬದಿಗಿಟ್ಟು ರೈತರನ್ನು ಉಳಿಸುವ ಕೆಲಸ ಮಾಡಬೇಕು. ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಕೂಡ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ದೊಡ್ಡದಾಗುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಮಳೆ ನೆರೆಗೆ ಸರ್ಕಾರಗಳೇ ಹೊಣೆ:
ರಾಜಕಾಲುವೆಗಳ ಅಸಮರ್ಪಕ ನಿರ್ವಹಣೆ ಹಾಗೂ ಒತ್ತುವರಿಯಿಂದ ಬೆಂಗಳೂರಿನಲ್ಲಿ ಮಳೆ ಅನಾಹುತ ಹೆಚ್ಚಾಗಿದೆ. ಇದುವರೆಗೂ ಬೆಂಗಳೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಆಡಳಿತ ನಡೆಸಿವೆ. ಕೆಂಪೇಗೌಡರು ಕಟ್ಟಿದ ಬೆಂಗಳೂರಲ್ಲಿ ಹಣಕ್ಕಾಗಿ ಕೆರೆ ಕಟ್ಟೆಗಳನ್ನೇ ನುಂಗಿದರು. ರಾಜಕಾಲುವೆಗಳನ್ನು ನುಂಗಲು ಬೆಂಬಲ ನೀಡಿದವರೇ ಈಗಿನ ಅನಾಹುತಗಳಿಗೆ ಹೊಣೆ ಹೊರಬೇಕು. ಅನೇಕ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಸಿಎಂ, ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಹತ್ತು ಲಕ್ಷ ಹೆಕ್ಟೇರ್ ಬೆಳೆ ನಾಶ ಎನ್ನುತ್ತಿದ್ದಾರೆ. ಕೃಷಿ ಸಚಿವರು ಐದು ಲಕ್ಷ ಹೆಕ್ಟೇರ್ ಭೂಮಿ ಬೆಳೆ ನಾಶ ಎನ್ನುತ್ತಿದ್ದಾರೆ. ಯಾರ ಮಾತನ್ನು ನಂಬಬೇಕು. ಸರ್ಕಾರ ಇಂಥ ಹೇಳಿಕೆಗಳನ್ನು ಬಿಟ್ಟು ಕೂಡಲೇ ಬೆಳೆ ನಷ್ಟ ಮಾಡಿಕೊಂಡಿರುವ ರೈತರಿಗೆ ನೆರವಾಗಬೇಕು ಎಂದು ಕುಮಾರಸ್ವಾಮಿ ಆಗ್ರಹಪಡಿಸಿದರು. ಇದನ್ನೂ ಓದಿ: ಬಿಜೆಪಿಗೆ ಹೆದರಿ ಪಟೇಲರ ಫೋಟೋಯಿಟ್ಟ ಕಾಂಗ್ರೆಸ್ – ಸಿದ್ದು, ಡಿಕೆ ಗುಸುಗುಸು ಫುಲ್ ವೈರಲ್

2023ಕ್ಕೆ ಸ್ವತಂತ್ರ ಸರ್ಕಾರ:
2023ಕ್ಕೆ ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮ ಪ್ರಯತ್ನದ ಬಗ್ಗೆ ಕೆಲವರು ತುಂಬಾ ಹಗುರವಾಗಿ ಮಾತಮಾಡುತ್ತಿದ್ದಾರೆ. ಯಾರು ಏನೇ ಹೇಳಲಿ, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕಿದೆ. ಯಾವುದೇ ಪಕ್ಷಗಳ ಹಂಗಿಲ್ಲದೆ ಅಧಿಕಾರಕ್ಕೆ ತರಬೇಕಿದೆ. ನಮಗೆ ದೊಡ್ಡ ಮಟ್ಟದ ನಾಯಕರಿಲ್ಲ. ಕಾರ್ಯಕರ್ತರೇ ನಮಗೆ ದೊಡ್ಡ ಶಕ್ತಿ. ಅದೇ ನಮಗೆ ಆತ್ಮವಿಶ್ವಾಸ. ಈ ಚುನಾವಣೆಯಲ್ಲಿ ನಾವು ಗೆಲ್ಲುವ ಮೂಲಕ ಸಂದೇಶ ಕೊಡಬೇಕಿದೆ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ನುಡಿದರು.

Share This Article
Leave a Comment

Leave a Reply

Your email address will not be published. Required fields are marked *