ಯುರೋಪಿಯನ್ ಒಕ್ಕೂಟದ ಉನ್ನತ ನಿಯೋಗದ ಜೊತೆ ಹೆಚ್‌ಡಿಕೆ ಮಹತ್ವದ ಮಾತುಕತೆ- ಏನೇನು ಹೂಡಿಕೆ ಚರ್ಚೆಯಾಗಿದೆ?

Public TV
5 Min Read

ನವದೆಹಲಿ: ಎಲೆಕ್ಟಿಕ್ ವಾಹನ ಹಾಗೂ ಉಕ್ಕು ಕ್ಷೇತ್ರದಲ್ಲಿ ಹೂಡಿಕೆ, ಸುಧಾರಿತ ತಂತ್ರಜ್ಞಾನ ಆಳವಡಿಕೆ, ವಾಯು ಮಾಲಿನ್ಯವನ್ನು ಗಣಣೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಯುರೋಪ್ ಒಕ್ಕೂಟದ ಜೊತೆ ಮಹತ್ವದ ಮಾತುಕತೆ ನಡೆಸಿದರು.

ನವದೆಹಲಿಯ ತಮ್ಮ ಸಚಿವಾಲಯದ ಕಚೇರಿಯಲ್ಲಿ ಶುಕ್ರವಾರ ಯುರೋಪ್ ಒಕ್ಕೂಟದ ಕೈಗಾರಿಕಾ ಕಾರ್ಯತಂತ್ರ ವಿಭಾಗದ ಕಾರ್ಯಕಾರಿ ಉಪಾಧ್ಯಕ್ಷ ಸ್ಟೀಫನ್ ಸೆಜರ್ನೆ ಅವರ ನೇತೃತ್ವದ ನಿಯೋಗದ ಜೊತೆ ಸಚಿವರು ಮಾತುಕತೆ ನಡೆಸಿದರು.ಇದನ್ನೂ ಓದಿ: ರಾಜ್ಯಗಳಿಗೆ ನೀಡುವ ತೆರಿಗೆ ಪಾಲು ಇನ್ನಷ್ಟು ಕಡಿತಕ್ಕೆ ಕೇಂದ್ರದ ಸಿದ್ಧತೆ, ಒಕ್ಕೂಟ ವಿರೋಧಿ ನಡೆ: ಸಿಎಂ

ಎರಡೂ ಕ್ಷೇತ್ರಗಳಲ್ಲಿ ಸುಸ್ಥಿರತೆ, ಹೂಡಿಕೆ ಮತ್ತು ತಾಂತ್ರಿಕ ಪ್ರಗತಿಗಳ ಮೇಲೆ ತಮ್ಮ ಚರ್ಚೆಯನ್ನು ಕೇಂದ್ರೀಕರಿಸಿದ ಸಚಿವರು, ಉಕ್ಕು ಮತ್ತು ಭಾರೀ ಕೈಗಾರಿಕೆಗಳ ವಲಯದಲ್ಲಿ ಭಾರತ ಮತ್ತು ಯುರೋಪ್ ಒಕ್ಕೂಟದ ನಡುವಿನ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಒತ್ತಿ ಹೇಳಿದರು.

ಚರ್ಚೆಯ ಪ್ರಮುಖ ಮಖ್ಯಾಂಶಗಳು:
ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಹೂಡಿಕೆ:
ಜಾಗತಿಕ ವಾಹನ ತಯಾರಿಕರಿಗೆ ಕಸ್ಟಮ್ ಸುಂಕ ಕಡಿತ ಮತ್ತು ಪ್ರೋತ್ಸಾಹ ನೀಡುವಲ್ಲಿ ಹೆಚ್ಚು ಉತ್ತೇಜನ ಕೊಡುತ್ತಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಕೇಂದ್ರ ಸಚಿವರು ಯುರೋಪ್ ಇವಿ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡಿದರು. ಭಾರತದ ಆಟೋಮೊಬೈಲ್ ಕ್ಷೇತ್ರವು ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಈ ಪರಿವರ್ತನೆಯ ದಿಕ್ಕಿನಲ್ಲಿ ವೇಗವಾಗಿ ಹೆಜ್ಜೆ ಇಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ವೇದಿಕೆಗಳಲ್ಲಿ ನುಡಿದಂತೆ, ದೇಶಿಯವಾಗಿ ವಾಯು ಮಾಲಿನ್ಯವನ್ನು ತಗ್ಗಿಸಿ ತಾಪಮಾನ ನಿಯಂತ್ರಣಕ್ಕೆ ಕೊಡುಗೆ ನೀಡಲು ಇವಿ ಕ್ಷೇತ್ರದಲ್ಲಿ ಯುರೋಪ್ ಕಂಪನಿಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಯುರೋಪ್ ನಿಯೋಗಕ್ಕೆ ಹಳಿದರು.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ:
ಯುರೋಪ್ ನಿಯೋಗವು ಇವಿ ಬ್ಯಾಟರಿ ತಯಾರಿಕೆಯ ಬಗ್ಗೆ ಹೆಚ್ಚು ಆಸಕ್ತಿ ತೋರಿದೆ. ಜಂಟಿ ಸಂಶೋಧನೆ ಮತ್ತು ನಾವೀನ್ಯತೆಗೆ ಬೆಂಬಲ ಕೊಡುವುದಾಗಿ ಭರವಸೆ ನೀಡಿತು. ಈ ನಿಟ್ಟಿನಲ್ಲಿ ನಿಯೋಗದ ಜೊತೆ ಸಚಿವರು ಮಾತುಕತೆ ನಡೆಸಿದರು.

ಬ್ಯಾಟರಿ ತಂತ್ರಜ್ಞಾನಗಳಲ್ಲಿ ಪ್ರಮಾಣೀಕರಣ:
ತಡೆರಹಿತ ವ್ಯಾಪಾರ ಮತ್ತು ತಾಂತ್ರಿಕ ವಿನಿಮಯವನ್ನು ಸುಗಮಗೊಳಿಸಲು, ಯುರೋಪ್ ಒಕ್ಕೂಟ ಮತ್ತು ಭಾರತದ ನಡುವೆ ಮತ್ತಷ್ಟು ಗಾಢವಾದ ಬಾಂಧವ್ಯ ಹೆಚ್ಚಿಸುವ ಬಗ್ಗೆ, ಎರಡೂ ಕಡೆ ಹೊಂದಾಣಿಕೆಯನ್ನು ಸಕ್ರಿಯಗೊಳಿಸುವುದಕ್ಕಾಗಿ ಬ್ಯಾಟರಿ ಘಟಕಗಳು ಮತ್ತು ತಂತ್ರಜ್ಞಾನಗಳಲ್ಲಿ ಏಕರೂಪದ ಮಾನದಂಡಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಗ್ರೀನ್ ಸ್ಟೀಲ್ ಉತ್ಪಾದನೆಯಲ್ಲಿ ಭಾರತ-ಯುರೋಪ್ ಒಕ್ಕೂಟದ ಪಾಲುದಾರಿಕೆ:
ಸುಸ್ಥಿರ ಕೈಗಾರಿಕಾ ಅಭಿವೃದ್ದಿಯ ಬಗ್ಗೆ ಪರಸ್ಪರ ಸಹಮತ ವ್ಯಕ್ತವಾಗಿದ್ದು, ಗ್ರೀನ್ ಸ್ಟೀಲ್ ಉತ್ಪಾದನೆಯಲ್ಲಿ ಜಾಗತಿಕ ನಾಯಕತ್ವ ವಹಿಸುವುದು ಭಾರತದ ಬದ್ಧತೆ ಆಗಿದೆ. ಗ್ರೀನ್ ಸ್ಟೀಲ್ ಉತ್ಪಾದನೆಯಲ್ಲಿ ತಾಂತ್ರಿಕ ಅಗತ್ಯಗಳ ಪೂರೈಕೆ ಮತ್ತು ಸಂಶೋಧನೆಗೆ ಹೆಚ್ಚಿನ ಸಹಯೋಗ ಹೊಂದುವ ಭಾರತದ ಆಕಾಂಕ್ಷೆಯನ್ನು ಸಚಿವರು ಪ್ರಬಲವಾಗಿ ಪ್ರತಿಪಾದಿಸಿದರು. ಹಸಿರು ಪರಿವರ್ತನೆಯತ್ತ ಒಂದು ಹೆಗ್ಗುರುತಾಗಿ, ಭಾರತವು ಗ್ರೀನ್ ಸ್ಟೀಲ್ ಅನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಬಲವಾಗಿ ಪ್ರತಿಪಾದಿಸಿದ ಮೊದಲ ದೇಶವಾಗಿದೆ ಮತ್ತು ಡಿಸೆಂಬರ್ 2024ರಲ್ಲಿ ಗ್ರೀನ್ ಸ್ಟೀಲ್ ಟ್ಯಾಕ್ಸಾನಮಿಯನ್ನು ಬಿಡುಗಡೆ ಮಾಡಿದೆ. ನಾವು ಜಾಗತಿಕ ಮಟ್ಟದಲ್ಲಿ ಈ ಪರಿವರ್ತನೆಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.

ಯುರೋಪ್ ನಿಯೋಗವು ಗ್ರೀನ್ ಸ್ಟೀಲ್ ಉತ್ಪಾದನೆಯಲ್ಲಿ ಭಾರತದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತಲ್ಲದೆ, ಗ್ರೀನ್ ಸ್ಟೀಲ್‌ಗೆ ಜಾಗತಿಕ ಮಾರುಕಟ್ಟೆಯನ್ನು ರೂಪಿಸುವ ಅಗತ್ಯವನ್ನು ಒತ್ತಿಹೇಳಿತು. ನೀತಿಯ ಚೌಕಟ್ಟುಗಳು, ಹೂಡಿಕೆ ಮತ್ತು ಪರಿಸರಪೂರಕ ಉಕ್ಕು ತಯಾರಿಕೆಯ ಅಳವಡಿಕೆಯನ್ನು ವಿಸ್ತರಿಸುವಲ್ಲಿ ಜಂಟಿ ಉಪಕ್ರಮಗಳ ಪಾತ್ರವನ್ನು ಎರಡೂ ದೇಶಗಳು ಒತ್ತಿ ಹೇಳಿದವು.

ಶೈಕ್ಷಣಿಕ ಮತ್ತು ಕೈಗಾರಿಕಾ ಸಹಯೋಗದಲ್ಲಿಯೂ ಭಾರತದ ಜೊತೆ ಕೆಲಸ ಮಾಡಲು ಯುರೋಪ್ ಒಕ್ಕೂಟ ಉತ್ಸುಕವಾಗಿದ್ದು, ಭವಿಷ್ಯದ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ, ವಿಶೇಷವಾಗಿ ಇಂಗಾಲವನ್ನು ಕಡಿಮೆ ಹೊರಸೂಸುವ ಉಕ್ಕಿನ ಉತ್ಪಾದನೆ, ಇಂಗಾಲದ ನಿಯಂತ್ರಣ ಮತ್ತು ಸುಧಾರಿತ ಉತ್ಪಾದನಾ ತಂತ್ರಗಳಲ್ಲಿ ಎರಡೂ ಪ್ರದೇಶಗಳಲ್ಲಿ ಶೈಕ್ಷಣಿಕ ಮತ್ತು ಕೈಗಾರಿಕೆಗಳ ನಡುವಿನ ಸಹಕಾರವನ್ನು ಹೆಚ್ಚಿಸುವಲ್ಲಿ ಪರಸ್ಪರ ಸಹಮತ ವ್ಯಕ್ತವಾಯಿತು.

ಹಸಿರು ಭವಿಷ್ಯಕ್ಕಾಗಿ ಒಗ್ಗಟ್ಟಿನ ದುಡಿಮೆ:
ಭಾರತ-ಯುರೋಪ್ ಒಕ್ಕೂಟದ ಕೈಗಾರಿಕಾ ಸಹಯೋಗವನ್ನು ಬಲಪಡಿಸುವ ಬದ್ಧತೆಯೊಂದಿಗೆ ಉನ್ನತ ಮಟ್ಟದ ಸಭೆಯು ಮುಕ್ತಾಯವಾಯಿತು. ಒಟ್ಟಾಗಿ, ನಾವು ಎಲ್ಲರಿಗೂ ಹಸಿರು ಮತ್ತು ಹೆಚ್ಚು ಆಶಾದಾಯಕವಾದ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಕೇಂದ್ರ ಸಚಿವರು ಹೇಳಿದರಲ್ಲದೆ, ಭಾರತದಲ್ಲಿ ವಿಪುಲವಾಗಿ ಬೆಳೆಯುತ್ತಿರುವ ಉಕ್ಕು, ಎಲೆಕ್ಟ್ರಿಕ್ ವಾಹನ ಹಾಗೂ ಎಲೆಕ್ಟ್ರಿಕ್ ಬ್ಯಾಟರಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಯುರೋಪಿಯನ್ ಉದ್ಯಮಿದಾರರನ್ನು ಮುಕ್ತವಾಗಿ ಆಹ್ವಾನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ವಿಕಸಿತ ಭಾರತ 2047 ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗಳ ಅಡಿಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಭಾರತದ ಕಾರ್ಯತಂತ್ರದ ದೃಷ್ಟಿಯೊಂದಿಗೆ, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಪಾಲುದಾರಿಕೆಯು ಸುಸ್ಥಿರ ಅಭಿವೃದ್ಧಿ ಮತ್ತು ತಾಂತ್ರಿಕ ಪ್ರಗತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಿದ್ಧವಾಗಿದೆ ಹೇಳಿದರು. ಸಭೆಯಲ್ಲಿ ಭಾರತದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯಗಳ ಉನ್ನತ ಅಧಿಕಾರಿಗಳು, ಯುರೋಪ್ ಒಕ್ಕೂಟದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.ಇದನ್ನೂ ಓದಿ: ಭಾರತ ಸೇರಿ ವಿಶ್ವಾದ್ಯಂತ ಫೇಸ್‌ಬುಕ್‌, ವಾಟ್ಸಪ್‌ ಡೌನ್‌

 

Share This Article