ಅಪವಿತ್ರ ಮೈತ್ರಿ ಎಂದು ಟೀಕಿಸಿದ್ದ ಅಮಿತ್ ಶಾಗೆ ತಿರುಗೇಟು ನೀಡಿದ ಹೆಚ್‍ಡಿಕೆ

Public TV
2 Min Read

ಬೆಂಗಳೂರು: ಚುನಾವಣೆ ಬಳಿಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಪವಿತ್ರ ಎಂದು ಟೀಕೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನಿಯೋಜಿತ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಟ್ವೀಟ್ 1: ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಕೂಟ ಅಪವಿತ್ರ ಎಂಬುದು ಅಮಿತ್ ಶಾ ಅವರ ವಾದ. ಹಾಗಾದರೆ ಪವಿತ್ರವಾದದ್ದು ಯಾವುದು? ನಮ್ಮ ಪಕ್ಷಗಳ ಚಿಹ್ನೆಯಿಂದ ಆಯ್ಕೆಯಾದವರನ್ನು ಖರೀದಿಸಲು ಮುಂದಾಗಿದ್ದು, ಅವರ ಮೂಲಕ ರಾಜೀನಾಮೆ ಕೊಡಿಸಲು ಪ್ರಯತ್ನಿಸಿದ್ದು ಪವಿತ್ರ ಕಾರ್ಯವೇ ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್ 2: ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಯಾವ ಕಾರಣಕ್ಕೆ ಸಂಭ್ರಮಿಸುತ್ತಿವೆ ಎಂದು ಅಮಿತ್ ಶಾ ಅವರು ಇಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಜಾತ್ಯತೀತ ಸರ್ಕಾರವೊಂದನ್ನು ರಚಿಸುತ್ತಿರುವ ಕಾರಣಕ್ಕೆ, ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ನಾವು ಸಂಭ್ರಮಿಸುತ್ತಿದ್ದೇವೆ ಅಮಿತ್ ಶಾ ಅವರೇ.

ಟ್ವೀಟ್ 3: ರಾಜ್ಯದಲ್ಲಿ ಯಾರಿಗೂ ಬಹುಮತ ಬಂದಿಲ್ಲ. ಬಿಜೆಪಿಗೂ ಕೂಡ. ಹಾಗಾಗಿಯೇ ಜಾತ್ಯತೀತ ತತ್ವದಡಿ ಜೆಡಿಎಸ್-ಕಾಂಗ್ರೆಸ್ ಒಂದಾಗಿವೆ. ಈ ಮೈತ್ರಿಗೆ ಒಂದು ನೆಲೆ ಇದೆ. ಸರ್ವರ ಹಿತ ಕಾಯುವ, ಎಲ್ಲರೊಂದಿಗೆ ಪ್ರಗತಿ ಕಡೆಗೆ ಹೆಜ್ಜೆ ಹಾಕುವುದು ಈ ಮೈತ್ರಿಯ ಮೂಲ ನೆಲೆ. ಅದನ್ನು ಅಪವಿತ್ರ ಎನ್ನುತ್ತಿರುವ ನಿಮ್ಮ ಅಭಿಪ್ರಾಯ ಅಪವಿತ್ರ.

ಟ್ವೀಟ್4: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದ ಅಡಿಯಲ್ಲಿ ಬಹುಮತ ಇರುವವರು ಸರ್ಕಾರ ರಚಿಸುತ್ತಾರೆ. ಏಕೈಕ ದೊಡ್ಡ ಪಕ್ಷವೆಂದು ಬಹುಮತವಿಲ್ಲದಿದ್ದರೂ ಸರ್ಕಾರ ಮಾಡಲಾಗದು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ 2.25 ಕೋಟಿ ಮತ ಪಡೆದಿದೆ. ಬಿಜೆಪಿ ಪಡೆದಿರುವುದು 1.31 ಕೋಟಿ ಮತ. ಯಾರಿಗೆ ಬಹುಮತ ಇದೆ? ಎಂಬುದನ್ನು ಅಮಿತ್ ಶಾ ಅರಿಯಲಿ  ಇದನ್ನೂ ಓದಿ: ನಾವು ಮೊದಲು ಕಾಂಗ್ರೆಸ್‍ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೀವಿ: ಹೆಚ್‍ಡಿಡಿ

ಇದಕ್ಕೂ ಮುನ್ನ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಅಮಿತ್ ಶಾ ಅವರು, ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೇ 17ರಂದು ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಅನುಮತಿ ಪಡೆದುಕೊಂಡು ಪ್ರಮಾಣ ವಚನ ಸ್ವೀಕರಿಸಿದ್ರು. ರಾಜ್ಯಪಾಲ ವಜೂಭಾಯಿ ವಾಲಾ ಬಹುಮತ ಸಾಬೀತಿಗೆ 15 ದಿನದ ಕಾಲಾವಕಾಶ ನೀಡಿದ್ದರು. ಆದ್ರೆ ಸುಪ್ರೀಂ ಕೋರ್ಟ್ ಅದೇಶದನ್ವಯ ಪ್ರಮಾಣ ವಚನದ ಮರುದಿನವೇ ಬಹುಮತ ಸಾಬೀತು ಮಾಡಬೇಕಾಗಿ ಬಂತು. ಸಹಜವಾಗಿ ನಮ್ಮ ಬಳಿ ಬಹುಮತವಿರದ ಕಾರಣ ಯಡಿಯೂರಪ್ಪ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು ಅಂತಾ ಹೇಳಿದ್ರು.

ಇದೇ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ್ದ ಅವರು, ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ 104 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವನ್ನು ಪಡೆದುಕೊಂಡಿದೆ. 104 ಸೀಟ್‍ಗಳೇನು ಕಡಿಮೆ ಸಂಖ್ಯೆಯೇನಲ್ಲ. ನಾವು ಕುದುರೆ ವ್ಯಾಪಾರ ಮಾಡುಲು ಮುಂದಾಗಿದ್ದೇವೆ ಅಂತಾ ಆರೋಪಿಸುತ್ತಿತ್ತು. ಆದ್ರೆ ತಾವೇ ಗೆದ್ದ ಎಲ್ಲ ಅಭ್ಯರ್ಥಿಗಳನ್ನು ರೆಸಾರ್ಟ್ ನಲ್ಲಿ ಇರಿಸಿತ್ತು ಎಂದು ಲೇವಡಿ ಮಾಡಿದ್ರು. ಅಲ್ಲದೇ ಸಂಸದೆ ಶೋಭಾ ಕರಂದ್ಲಾಜೆ, ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಜೆಡಿಎಸ್ ಮೈತ್ರಿಯನ್ನು ಅಪವಿತ್ರ ಮೈತ್ರಿ ಎಂದು ಆರೋಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *