ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿಗೆ ಇಂದು 59ನೇ ಹುಟ್ಟು ಹಬ್ಬದ ಸಂಭ್ರಮ.
ಜೆಪಿ ನಗರ ನಿವಾಸದಲ್ಲಿ ಎಚ್‍ಡಿ ಕುಮಾರಸ್ವಾಮಿ ತಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ್ರು. ಹುಟ್ಟುಹಬ್ಬದ ಹಿನ್ನಲೆಯಲ್ಲಿ ನೂರಾರು ಅಭಿಮಾನಿಗಳು ಮನೆ ಬಳಿ ಜಾಮಾಯಿಸಿ ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭ ಕೋರಿದ್ರು. ಹುಟ್ಟುಹಬ್ಬದ ಸಂಭ್ರಮದಲ್ಲಿ ಜೆಡಿಎಸ್‍ನ ಎಲ್ಲಾ ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗಿಯಾಗಿದ್ರು.
ಇದೇ ವೇಳೆ ಕುಮಾರಸ್ವಾಮಿ ಪುತ್ರ ನಿಖಿಲ್ ತಮ್ಮ ತಂದೆಗೆ ಶುಭ ಕೋರಿದ್ರು. ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಅಧ್ಯಕ್ಷ ಲಕ್ಷ್ಮೀಮೂರ್ತಿ ರಸ್ತೆ ಬದಿ ಮಲಗಿದ್ದ ಬಡವರಿಗೆ ಹಣ್ಣುಹಂಪಲು ವಿತರಿಸಿದ್ರು.
ಇದೇ ವೇಳೆ ಪಬ್ಲಿಕ್ ಟಿವಿ ಪ್ರತಿನಿಧಿಯೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನನ್ನ ಹುಟ್ಟುಹಬ್ಬದಂದು ರಾಜ್ಯದ ಹಲವಾರು ಭಾಗದಿಂದ ಬರುವ ಯುವ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸುವುದು, ಇದು ಯಾವುದೋ ಜನ್ಮದ ಋಣ. ಕಲಾವಿದರಿಗೆ ರಾತ್ರಿಯೆಲ್ಲಾ ಕಾದು ಹುಟ್ಟುಹಬ್ಬ ಆಚರಣೆ ಮಾಡುವುದಿದೆ. ಆದ್ರೆ ಒಬ್ಬ ರಾಜಕೀಯ ಪಕ್ಷದ ವ್ಯಕ್ತಿಯನ್ನ ಯುವಕರು ಈ ಮಟ್ಟಿಗೆ ಗುರುತಿಸಿರುವುದು ನನ್ನ ಜವಾಬ್ದಾರಿಯನ್ನ ಹೆಚ್ಚಿನ ಮಟ್ಟದಲ್ಲಿ ನಿರ್ವಹಿಸಬೇಕೆಂಬುದು ಮನಸ್ಸಿನಲ್ಲಿದೆ ಅಂದ್ರು.
ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ರಕ್ತದಾನ ಶಿಬಿರ, ಸಸ್ಯಗಳ ದಾನ, ಬಾಂಡ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದಕ್ಕೆಲ್ಲಾ ಚಾಲನೆ ಕೊಡುವುದಿದೆ. ಅಭಿಮಾನಿಗಳೊಂದಿಗೆ ಈ ದಿನ ಕಳೆಯುತ್ತೇನೆ ಅಂದ್ರು.
ಈಗಾಗಲೇ ಪಕ್ಷದ ಸಂಘಟನೆಗೆ ಚಾಲನೆ ಕೊಟ್ಟಿದ್ದೇವೆ. ಪಕ್ಷವನ್ನ ಅಧಿಕಾರಿಕ್ಕೆ ತರೋವರೆಗೆ ವಿಶ್ರಮಿಸೋ ಪ್ರಶ್ನೆಯೇ ಇಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸೋ ನಿಟ್ಟಿನಲ್ಲಿ ನನ್ನ ಜೀವನ ಮುಡಿಪಾಗಿಡ್ತೀನಿ ಅಂದ್ರು. ಯಾವುದೇ ಕಾರಣಕ್ಕೂ ನಿಖಿಲ್ ರಾಜಕೀಯಕ್ಕೆ ಬರೋ ಪ್ರಶ್ನೆ ಇಲ್ಲ. ಆದ್ರೆ ಪಕ್ಷದ ಪ್ರಚಾರದಲ್ಲಿ ಭಾಗವಹಿಸುತ್ತಾನೆ ಅಂತ ಹೇಳಿದ್ರು.