ಮಂಗಳೂರಲ್ಲಿ ಬಾಂಬ್ ಪತ್ತೆ, ಪೊಲೀಸರು ಮತ್ತೊಂದು ಕಥೆ ಸೃಷ್ಟಿಸದಿರಲಿ: ಹೆಚ್‍ಡಿಕೆ

Public TV
2 Min Read

ಚಿಕ್ಕಮಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಕೂಡಲೇ ಆರೋಪಿ ಪತ್ತೆ ಮಾಡಬೇಕು. ಇದಕ್ಕೇ ಹದಿನೈದು ದಿನ ಅಥವಾ ತಿಂಗಳ ಸಮಯ ಪಡೆದು, ಬಳಿಕ ಪೊಲೀಸರು ಮತ್ತೊಂದು ಕಥೆ ಸೃಷ್ಟಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಶೃಂಗೇರಿಯಲ್ಲಿ ಕುಟುಂಬದಿಂದ ನಡೆಯುತ್ತಿರುವ ಯಾಗದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಎಚ್‍ಡಿಕೆ, ಅಲ್ಲಿ ಸುತ್ತ ಸಿಸಿಟಿವಿಗಳಿವೆ. ಬಾಂಬ್ ಯಾರು ಇಟ್ಟಿದ್ದೆಂದು ಪತ್ತೆ ಹಚ್ಚುವುದು ದೊಡ್ಡದಲ್ಲ. ತನಿಖೆ ನಡೆಸಲು ಪೊಲೀಸರು ಮತ್ತೊಂದು ತಿಂಗಳು ತಗೆದುಕೊಳ್ಳಬಾರದು. ನಂತರ ತಿಂಗಳು ಬಿಟ್ಟು ಮತ್ತೊಂದು ಕಥೆ ಸೃಷ್ಟಿಸಬಾರದು. ವಾಸ್ತವಾಂಶವನ್ನು ಜನರ ಮುಂದಿಡಬೇಕು ಎಂದರು.

ಸರ್ಕಾರ ಕೆಲ ಪೊಲೀಸರಿಂದ ಜನತೆಯಲ್ಲಿ ಗೊಂದಲದ ವಾತಾವರಣ ನಿರ್ಮಿಸುತ್ತಿದೆ ಎಂಬುದು ನನ್ನ ಭಾವನೆ. ಟೌನ್‍ಹಾಲ್ ಬಳಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಿದ ಘಟನೆಗೆ ಸಂಬಂಧಿಸಿದಂತೆ ಭಾಸ್ಕರ್ ರಾವ್ ಏಳು ಕಲ್ಲುಗಳು ಬಿದ್ದಿವೆ ಎನ್ನುತ್ತಾರೆ. ಆದರೆ ಒಂದು ತಿಂಗಳಿಂದ ಯಾಕೆ ಹೇಳಿಲ್ಲ, ಒಂದು ವರ್ಗದ ಜನರನ್ನು ಓಲೈಸಲು ಅಮಾಯಕರನ್ನು ಬಲಿ ಕೊಡಲಾಗುತ್ತಿದೆ. ಅಲ್ಲಿ ಮಾಧ್ಯಮದ ಕ್ಯಾಮರಾಗಳು ಇದ್ದವು. ಕಲ್ಲು ಹೊಡೆದ ಸೂಕ್ಷ್ಮ ವಸ್ತುವು ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ದೇಶದ ಜನರ ನಡುವೆ ಪರಸ್ಪರ ಅಪನಂಬಿಕೆಯನ್ನುಂಟು ಮಾಡುವ ಕೆಲಸವನ್ನು ಸರ್ಕಾರವೇ ಮಾಡುತ್ತಿದ್ದು, ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ನಾನೇ ದಾಖಲೆ ಕೊಡುತ್ತಿದ್ದೆ: ಕಲ್ಲಡ್ಕ ಪ್ರಭಾಕರ್ ಭಟ್ ರಾಜ್ಯವನ್ನು ಸುತ್ತಲು ಪ್ರಾರಂಭಿಸಿದ್ದಾರೆ. ಈಗ ಅವರೇ ಪ್ರಮುಖರಾಗಿದ್ದಾರೆ. ರಾಮನಗರಕ್ಕೆ ಎಸ್.ಆರ್.ಹಿರೇಮಠ್ ಹಾಗೂ ರವಿಕೃಷ್ಣಾರೆಡ್ಡಿ ತೆರಳಿದ್ದರು. ಅವರಿಗೆ ಯಾವುದೇ ದಾಖಲೆ ಬೇಕಾಗಿದ್ದರೂ ನಾನೇ ಕೊಡುತ್ತಿದ್ದೆ. 1985 ರಲ್ಲಿ ನಾನು ರಾಜಕಾರಣಕ್ಕೆ ಬಂದಿರಲಿಲ್ಲ. ನಾನು ಸಿನಿಮಾ ಕ್ಷೇತ್ರದಲ್ಲಿ ಇದ್ದೆ. ಆ ಸಮಯದಲ್ಲಿ ನಾನು ಭೂಮಿ ಖರೀದಿ ಮಾಡಿದ್ದು. ಆ ಭೂಮಿ ಖರೀದಿ ಮಾಡಿ 35 ವರ್ಷಗಳೇ ಕಳೆದಿವೆ. 35 ವರ್ಷದ ವಿಚಾರವನ್ನಿಟ್ಟುಕೊಂಡು ಖಾಲಿ ಡಬ್ಬದಂತೆ ಅಲ್ಲಾಡಿಸುತ್ತಿದ್ದಾರೆ. ಅವರಿಗೆ ಯಾವುದೇ ಮಾಹಿತಿ ಬೇಕಾದರೂ ನಾನೇ ಕೊಡುತ್ತಿದ್ದೆ. ನಾನು ಯಾರಿಗೂ ತೊಂದರೆ ಮಾಡಿಲ್ಲ. ರಾಜಕಾರಣದ ನಂತರ ನನ್ನ ಎಲ್ಲಾ ಆಸ್ತಿ ವಿವರಗಳನ್ನು ನೀಡಲು ಸಿದ್ಧನಿದ್ದೇನೆ ಎಂದರು.

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮೊದಲು ನೆರೆ ಪೀಡಿತರಿಗೆ ಪರಿಹಾರ ನೀಡಲಿ. ನಂತರ ಎಷ್ಟು ಜನಕ್ಕೆ ಬೇಕಾದರೂ ಮಂತ್ರಿ ಸ್ಥಾನ ನೀಡಲಿ. ಬೇಕಾದರೆ 34 ಜನರನ್ನೂ ಉಪ ಮುಖ್ಯಮಂತ್ರಿ ಮಾಡಲಿ ನನಗೆ ಸಂಬಂಧವಿಲ್ಲ. ಕಷ್ಟಪಟ್ಟು ಅಧಿಕಾರ ಹಿಡಿದಿದ್ದಾರೆ. ಎಲ್ಲವನ್ನೂ ಜನರೇ ತೀರ್ಮಾನ ಮಾಡಲಿ. ರಾಜಕೀಯ ಪಕ್ಷಗಳ ಡ್ರಾಮಾವನ್ನು ಜನರೇ ತೀರ್ಮಾನಿಸುತ್ತಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *