ದೇವೇಗೌಡ್ರ ಮೇಲೆ ಗೌರವ ಇದ್ರೆ ಕೂಡ್ಲೇ ಬಂದು ತನಿಖೆ ಎದುರಿಸು- ಪ್ರಜ್ವಲ್‌ಗೆ ಹೆಚ್‌ಡಿಕೆ ಮನವಿ

Public TV
1 Min Read

ಬೆಂಗಳೂರು: ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಮೇಲೆ ಗೌರವ ಇದ್ದರೆ ಈ ಕೂಡಲೇ ಬಂದು ತನಿಖೆ ಎದುರಿಸು ಎಂದು ಮಾಜಿ ಸಿಎಂ ಹೆಚ್‌ಡಿಕೆ ಕುಮಾರಸ್ವಾಮಿಯವರು ಸಂಸದ ಪ್ರಜ್ವಲ್‌ ರೇವಣ್ಣಗೆ ಮನವಿ ಮಾಡಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾಕೆ ಹೆದರಬೇಕು. ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ಕಾರ್ಯಕರ್ತರ ಮೇಲೆ ಪಕ್ಷ ಬೆಳೆದಿದೆ. ಅವರ ಆಶೀರ್ವಾದದಿಂದ ಬೆಳೆದಿದ್ದೇವೆ. ಹೀಗಾಗಿ ವಾಪಸ್ ಬಂದು ತನಿಖೆಗೆ ಸಹಕಾರ ಕೊಡುವಂತೆ ಪ್ರಜ್ವಲ್ ಗೆ ಕೈ‌ಮುಗಿದು ಕೇಳುತ್ತೇನೆ ಎಂದರು. ಇದನ್ನೂ ಓದಿ: ಮನೆಯ ಸಹಾಯಕಿ ಮೇಲೆ ಲೈಂಗಿಕ ದೌರ್ಜನ್ಯ – ರೇವಣ್ಣಗೆ ಜಾಮೀನು ಮಂಜೂರು

ಎಲ್ಲೇ ಇದ್ದರೂ ಬಂದು ತನಿಖೆ ಎದುರಿಸು. ಮುಂದಿನ 24, 48 ಗಂಟೆ ಒಳಗೋ ಬಂದು ತನಿಖೆ ಎದುರಿಸು. ಎಷ್ಟು ದಿನ ಈ ಕಳ್ಳ-ಪೊಲೀಸ್ ಆಟ. ದೇವೇಗೌಡರಿಗೆ ಮನವಿ ಮಾಡಿ ಅಂತ ಹೇಳಿದ್ದೆ. ಆದರೆ ಈಗ ನಾನೇ ಮನವಿ ಮಾಡ್ತೀನಿ. ಎಲ್ಲೇ ಇದ್ದರೂ ಬಂದು ತನಿಖೆ ಎದುರಿಸು ಎಂದು ಕುಮಾರಸ್ವಾಮಿ ಹೇಳಿದರು.

ಪೆನ್‌ಡ್ರೈವ್‌ ಪ್ರಕರಣ ಹೊರ ಬರುತ್ತಿದ್ದಂತೆಯೇ ಸಂಸದ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ. ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದ್ರೂ ಪ್ರಜ್ವಲ್‌ ಪತ್ತೆ ಇಲ್ಲ. ಇತ್ತ ಈ ಪ್ರಕರಣವು ದಿಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಶಿವರಾಮೇಗೌಡ ಹಾಗೂ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ನಡುವೆ ನಡೆದ ಸಂಭಾಷಣೆಯ ಒಂದೊಂದೇ ಆಡಿಯೋ ಕ್ಲಿಪ್‌ಗಳು ಹೊರಬರುತ್ತಿದ್ದು, ಪ್ರಕರಣಕ್ಕೆ ಟ್ವಿಸ್ಟ್‌ ಕೊಡುತ್ತಿವೆ.

Share This Article