ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್‌

Public TV
3 Min Read

ಮಂಡ್ಯ: ದೀಪಾವಳಿ ಕೊಡುಗೆ (Deepavali Gift) ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇರ ಆರೋಪ ಮಾಡಿದರು.

ಮಂಡ್ಯ ನಗರದ (Mandya City) ಸಂಜಯ್ ವೃತ್ತದಲ್ಲಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಆಟೋ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ದೀಪಾವಳಿ ಕೊಡುಗೆ ಎಂದರೆ ಏನೋ ನಮಗೆ ದೊಡ್ಡ ಕೊಡುಗೆ ಕೊಡುತ್ತದೆ ಎಂದು ಜನರು ಭಾವಿಸಿದ್ದರು. ದೊಡ್ಡ ದೊಡ್ಡ ಜಾಹೀರಾತುಗಳನ್ನ ನೋಡಿ ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಅದು ದೀಪಾವಳಿ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮಹಾನ್ ದೋಖಾ ಎಂದು ಕಿಡಿಕಾರಿದರು. ಇದನ್ನೂ ಓದಿ: ನ.1ರಿಂದ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ – ನಿವೇಶನಗಳಿಗಷ್ಟೇ ಎ ಖಾತೆ; ಕಟ್ಟಡಗಳ ಸಕ್ರಮ ಇಲ್ಲ

Khata 2

ಬೆಂಗಳೂರು (Bengaluru) ನಗರದ ಜನರಿಗೆ ದೀಪಾವಳಿ ಕೊಡುಗೆ ನೀಡೋದಕ್ಕೆ ಬದಲಾಗಿ ಶಾಕ್ ಕೊಡ್ತಿದ್ದಾರೆ. ಅದು ಹೇಗಿದೆ ಎಂದರೆ, ಬಿ ಖಾತಾದಿಂದ ಎ ಖಾತಾಗೆ (A Khata) ಪರಿವರ್ತನೆ ಮಾಡುವ ಅರ್ಜಿಗೆ 500 ರೂಪಾಯಿ ಶುಲ್ಕ ತುಂಬಬೇಕು. ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ ಈ ಸರ್ಕಾರ. 30/40 ನಿವೇಶನಕ್ಕೆ 4 ರಿಂದ 8 ಲಕ್ಷ ರೂಪಾಯಿವರೆಗೂ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು 10 ರಿಂದ 13 ಸಾವಿರ ರೂಪಾಯಿ ಅಷ್ಟನ್ನೇ ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷಗಳಲ್ಲಿ ಹಣ ಏರಬೇಕಿದೆ. ಎ-ಖಾತಾ ದಂಧೆಯ ಮೂಲಕ ರಾಜ್ಯ ಸರ್ಕಾರ 15,000 ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು. ಇದನ್ನೂ ಓದಿ: ಐನಾಕ್ಸ್‌ವಿಂಡ್‌ ಕಂಪನಿಯಿಂದ ಕುಷ್ಟಗಿಯಲ್ಲಿ 400 ಕೋಟಿ ಹೂಡಿಕೆ: ಎಂಬಿ ಪಾಟೀಲ್‌

Khata

ಹಣ ಮಾಡುವುದಕ್ಕೆಂದೇ ಈ ಸರ್ಕಾರ ಇದೆ
ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡೋದು ಎಂದರೆ ಹೀಗೆನಾ? ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಈ ಸರ್ಕಾರ ಬಂದ ಮೇಲೆ ನಿರಂತರವಾಗಿ ಸುಲಿಗೆ ಮಾಡುತ್ತಿದೆ. ಕೇವಲ ಹಣ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಪ್ರತಿಯೊಂದರಲ್ಲೂ ದುಡ್ಡು ಮಾಡುವ ಬಗ್ಗೆಯಷ್ಟೇ ಆಲೋಚನೆ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರಾಜ್ಯದ ಸರ್ಕಾರಿ ನೌಕರರ DA 2% ಏರಿಕೆ

ಈ ಸರ್ಕಾರದಲ್ಲಿ ಹಣ ಇಲ್ಲ. ಅದಕ್ಕೆ ಕಂಡ ಕಂಡ ಕಡೆ ಹಣಕ್ಕೆ ಕೈ ಹಾಕುತ್ತಿದೆ. ಬೆಂಗಳೂರಿನ ಗುಂಡಿ ಮುಚ್ಚೋದು ಇರಲಿ. ರಾಜ್ಯದಲ್ಲಿರುವ ಗುಂಡಿಗಳನ್ನೂ ಮುಚ್ಚೋಕೆ ಇವರಿಂದ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಸಚಿವರು, ಜೆಡಿಎಸ್ ಕೊಡುಗೆ ಏನು ಎಂದು ಹಾಸನದಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ. ನನ್ನ ಆರೋಗ್ಯ ವಿಚಾರಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ದೆಹಲಿಗೆ ಬಂದಿದ್ದರು. 2018ರಲ್ಲಿ ನೀವು ಕೊಟ್ಟ 500 ಕೋಟಿ ರೂಪಾಯಿ ಅನುದಾನದಲ್ಲಿಯೇ ಇನ್ನೂ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳುತ್ತಾರೆ. ಅನುದಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ನಾನು ಅಧಿಕಾರದಲ್ಲಿ ಇದ್ದ ಎಷ್ಟು ಕೊಟ್ಟಿದ್ದೇನೆ? ಇವರು ಎಷ್ಟು ಕೊಟ್ಟಿದ್ದಾರೆ? ಎಂಬ ಬಗ್ಗೆ ಜನರ ಮುಂದೆ ದಾಖಲೆ ಇಡಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ಸಂಸದರ ನಿಧಿಯಲ್ಲಿ ಆಟೋ ನಿಲ್ದಾಣ ಲೋಕಾರ್ಪಣೆ
ಮಂಡ್ಯದ ಸಂಜಯ ನಗರ ವೃತ್ತದಲ್ಲಿ ಸಂಸದರ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿಯ ಆಟೋ ನಿಲ್ದಾಣವನ್ನು ಇದೇ ಸಂದರ್ಭದಲ್ಲೂ ಹೆಚ್‌ಡಿಕೆ ಉದ್ಘಾಟಿಸಿದರು. ಇದನ್ನೂ ಓದಿ: ಎಪಿಎಲ್‌ಗೆ ಬದಲಾದ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್; ದಾಖಲೆ ಇದ್ರೆ 45 ದಿನದೊಳಗೆ ಮತ್ತೆ ಬಿಪಿಎಲ್ ಕಾರ್ಡ್ ಭಾಗ್ಯ

ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡರು ಹಾಗೂ ಕೇಂದ್ರ ಸಚಿವರ ಸಂಸತ್ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಆಟೋ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಇದು ಸುಸಜ್ಜಿತ, ವಿಶಾಲ ಆಟೋ ನಿಲ್ದಾಣ ಆಗಿದ್ದು, ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಇಲ್ಲಿ ಸುಸಜ್ಜಿತ ಆಟೋ ನಿಲ್ದಾಣ ಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ಆಗಿತ್ತು. ಆ ಬೇಡಿಕೆ ಈಡೇರಿಸುವ ಕೆಲಸ ಆಗಿದೆ. ಅಲ್ಪ ಕಾಲದಲ್ಲಿಯೇ ನಿಲ್ದಾಣ ನಿರ್ಮಾಣ ಆಗಿದೆ ಎಂದರು.

ನಗರದಲ್ಲಿ ಆಟೋ ವ್ಯವಸ್ಥೆ ಜನತೆಯ ಸಂಚಾರಕ್ಕೆ ಬಹಳ ಅನುಕೂಲವಾಗಿದೆ. ಆದರೆ, ಆಟೋ ಚಾಲಕರು ಮಳೆ, ಬಿಸಿಲಿನಲ್ಲಿ ಕಷ್ಟ ಅನುಭವಿಸುತ್ತಿದ್ದರು. ನಮಗೊಂದು ಸುಸಜ್ಜಿತ ನಿಲ್ದಾಣ ಮಾಡಿಕೊಡಿ ಎಂದು ಕೇಳಿದ್ದರು. ತಕ್ಷಣವೇ ಅದಕ್ಕೆ ಕ್ರಮ ವಹಿಸಿದ್ದೇವೆ. ದೇವೇಗೌಡರ ಸಂಸತ್ ನಿಧಿ ಹಾಗೂ ನನ್ನ ಪಾಲಿನ ಸಂಸತ್ ನಿಧಿಯ ಅನುದಾನದಿಂದ ಕಾಮಗಾರಿ ಕೈಗೆತ್ತಿಗೊಂಡಿದ್ದೆವು. ಈ ಸಂದರ್ಭದಲ್ಲಿ ಅನುದಾನ ನೀಡಿದ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

Share This Article