‘ನಮ್ಮ ಅಪ್ಪಾಜಿ ಕ್ಯಾಂಟೀನ್’ಗಿಂದು ದೇವೇಗೌಡ್ರಿಂದ ಚಾಲನೆ- 5 ರೂ.ಗೆ ತಟ್ಟೆ ಇಡ್ಲಿ-ವಡೆ, 10 ರೂ.ಗೆ ಮುದ್ದೆ-ಬಸ್ಸಾರು

Public TV
1 Min Read

ಬೆಂಗಳೂರು: ರಿಯಾಯಿತಿ ದರದಲ್ಲಿ ಸಿಲಿಕಾನ್ ಸಿಟಿ ಜನರ ಹಸಿವು ನೀಗಿಸಲು ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆಯಲು ಮುಂದಾಗಿದ್ರೆ, ಇತ್ತ ಜೆಡಿಎಸ್ ಎಂಎಲ್‍ಸಿ ಶರವಣ ನೇತೃತ್ವದಲ್ಲಿ ‘ನಮ್ಮ ಅಪ್ಪಾಜಿ ಕ್ಯಾಂಟೀನ್’ ತೆರೆಯುತ್ತಿದೆ.

ಇಂದಿರಾ ಕ್ಯಾಂಟೀನ್‍ಗೂ ಮುನ್ನವೇ ಅಪ್ಪಾಜಿ ಕ್ಯಾಂಟೀನ್ ಸಿದ್ಧಗೊಂಡಿದ್ದು, ಇಂದಿನಿಂದ ಜನರಿಗೆ ರುಚಿಯಾದ ತಿಂಡಿ-ಊಟ ನೀಡಲು ಮುಂದಾಗಿದೆ. ಶ್ರೀಸಾಯಿ ಸಮರ್ಪಣ ಚಾರಿಟೆಬಲ್ ವತಿಯಿಂದ ನಮ್ಮ ಅಪ್ಪಾಜಿ ಕ್ಯಾಂಟೀನ್ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಪ್ರಾರಂಭದಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರದಲ್ಲಿ ಕ್ಯಾಂಟೀನ್ ಆರಂಭವಾಗುತ್ತಿದ್ದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಇಂದು ಬೆಳಗ್ಗೆ 11 ಗಂಟೆಗೆ ಕ್ಯಾಂಟೀನ್‍ಗೆ ಚಾಲನೆ ನೀಡುತ್ತಿದ್ದಾರೆ.

5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್, ಕೇಸರಿಬಾತ್ ಹಾಗೆ 10 ರೂ.ಗೆ ಪೊಂಗಲ್, ಮುದ್ದೆ-ಬಸ್ಸಾರು, ಅನ್ನ ಸಾಂಬಾರ್, ರೈಸ್ ಬಾತ್. 3 ರೂಪಾಯಿಗೆ ಬಿಸಿಬಿಸಿ ಕಾಫಿ-ಟೀ ಈ ಕ್ಯಾಂಟೀನ್‍ನಲ್ಲಿ ಸಿಗಲಿದೆ. ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ತನಕ ಕ್ಯಾಂಟೀನ್ ಓಪನ್ ಇರುತ್ತದೆ. ನಮ್ಮ ಅಪ್ಪಾಜಿ ಕ್ಯಾಂಟೀನ್‍ನಲ್ಲಿಯೇ ಅಡುಗೆ ತಯಾರಿ ಮಾಡಲಾಗುತ್ತದೆ. 10 ಲಕ್ಷ ರೂ. ವೆಚ್ಚದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ನಿರ್ಮಾಣಗೊಂಡಿದೆ. ಆರಂಭದಲ್ಲಿ ಸಾವಿರ ಮಂದಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಚೆನ್ನಮ್ಮ ದೇವೇಗೌಡರು ಉಪಸ್ಥಿತರಿರಲಿದ್ದಾರೆ. ಒಂದು ವೇಳೆ ಈ ಕ್ಯಾಂಟೀನ್ ಯಶಸ್ವಿಯಾದ್ರೆ ನಗರದ 27 ವಿಧಾನಸಭಾ ಕ್ಷೇತ್ರದಲ್ಲೂ ವಿಸ್ತರಿಸಲು ಟಿ.ಎ.ಶರವಣ ನಿರ್ಧರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *