ಜೆಡಿಎಸ್ ಕಚೇರಿಯಲ್ಲಿ 15 ನಿಮಿಷ ಕಣ್ಣೀರು ಹಾಕಿದ್ರು ಎಚ್‍ಡಿಕೆ : ಎಚ್‍ಡಿಡಿ

Public TV
2 Min Read

– ಮೈತ್ರಿ ಸರ್ಕಾರ ಹೋದ್ರು ಚಿಂತೆ ಇಲ್ಲ

ಬೆಂಗಳೂರು: ಮೈತ್ರಿ ಸರ್ಕಾರದ ಸಿಎಂ ಆಗಿ ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಸರ್ಕಾರ ಉರುಳಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡರು, ಸರ್ಕಾರ ಹೋದರು ಕೂಡ ಚಿಂತೆ ಇಲ್ಲ. ಯಾರು ಬಂದರು ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅತೃಪ್ತ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಸಿದ್ಧತೆ ನಡೆಸಿರುವ ಎಚ್‍ಡಿಡಿ ಇಂದು ಜೆಪಿ ಭವನದ ಪಕ್ಷದ ಕಚೇರಿಯಲ್ಲಿ ರಾಜರಾಜೇಶ್ವರಿ ನಗರ, ಕೆ.ಆರ್.ಪುರಂ ಕ್ಷೇತ್ರದ ಮುಖಂಡರ ಸಭೆ ಆರಂಭ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಮಗ ಸಿಎಂ ಆದ ಸಂದರ್ಭದಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ. ಸುಮಾರು 15 ನಿಮಿಷ ಪಕ್ಷದ ಕಚೇರಿಯಲ್ಲಿ ಕಣ್ಣೀರು ಹಾಕಿದ್ದರು. ಎಲ್ಲವೂ ನನಗೆ ಗೊತ್ತಿದೆ ಎಂದರು.

ನಾವು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತ್ತೇವೆ. ಜೆಡಿಎಸ್ ಅವರು ಬಿಜೆಪಿಗೆ ಬೆಂಬಲ ನೀಡುವ ವರದಿ ಸುಳ್ಳು. ಏನೇ ಮಾಡಿದರು ಜೆಡಿಎಸ್ ಪಕ್ಷವನ್ನು ನಾಶ ಪಡಿಸಲು ಅಗಲ್ಲ. ಆದರೆ ಸರ್ಕಾರದ ಎಲ್ಲ ಕೆಲಸಗಳನ್ನು ವಿರೋಧ ಮಾಡಲ್ಲ. ವಿಷಯಾಧರಿತವಾಗಿ ಕೆಲಸ ಮಾಡುತ್ತೇವೆ. ಸರ್ಕಾರ ಹೋದರು ಪರವಾಗಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಪಕ್ಷ ಸಂಘಟನೆ ಮಾಡಲು ತಿಳಿಸಿದ್ದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಬೆಂಬಲ ನೀಡುವ ಬಗ್ಗೆ ಮಾತನಾಡಿದ ಅವರು, ನಾವು 34 ಶಾಸಕರಿದ್ದು, ಜಿಟಿ ದೇವೇಗೌಡರ ಹೇಳಿಕೆಯನ್ನ ನಾನು ಅಲ್ಲಗೆಳೆಯುವುದಿಲ್ಲ. ಸರ್ಕಾರ ಕೇವಲ 14 ತಿಂಗಳಿಗೆ ಪತನವಾದ ಹಿನ್ನೆಲೆಯಲ್ಲಿ ಮನೆಗೆ ಹೋಗಬೇಕು ಎಂಬ ನೋವಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಅಭಿಪ್ರಾಯ ಕಾಂಗ್ರೆಸ್ ಶಾಸಕರಲ್ಲೂ ಇದೆ. ಇದನ್ನೇ ಜಿಟಿಡಿ ಹೇಳಿದ್ದಾರೆ ಅಷ್ಟೇ. ಆದರೆ ಅದನ್ನೇ ದೊಡ್ಡ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.

ನಮ್ಮ ಪಕ್ಷದಿಂದ 34 ಶಾಸಕರು ಇದ್ದಾರೆ. ಒಂದೊಮ್ಮೆ ಬಿಎಸ್ ಯಡಿಯೂರಪ್ಪ ಅವರು ಸರ್ಕಾರ ರಚಿಸಲು ವಿಫಲವಾದರೆ ಬೆಂಬಲ ನೀಡುವ ಬಗ್ಗೆ ಹೇಳಿದ್ದಾರೆ. ಅತೃಪ್ತ ಶಾಸಕರ ಕಥೆ ಏನಾಗುತ್ತದೆ ಎಂದು ಕಾದು ನೋಡುತ್ತೇನೆ. ಕುಮಾರಸ್ವಾಮಿ ಏಕಾಂಗಿಯಾಗಿ 40 ಸೀಟು ತಂದಿದ್ದರಿಂದ ಅವರೇ ನಮಗೆ ಸ್ಟಾರ್ ಕ್ಯಾಂಪೇನರ್. ಅಲ್ಲದೇ ದ್ವೇಷ ರಾಜಕಾರಣ ಮಾಡಲ್ಲ ಎಂದ ಬಿಎಸ್‍ವೈ ನಿರ್ಧಾರಕ್ಕೆ ಸ್ವಾಗತ ಕೋರಿದರು. ಅಲ್ಲದೇ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿದ್ದು, ಇದಕ್ಕೆ ಯಾವುದೇ ಚರ್ಚೆ ನಡೆಸದೆ ಅಂಗೀಕಾರ ಮಾಡುವ ಅಗತ್ಯ ಇದೆ. ಇದಕ್ಕೆ ಸ್ಪೀಕರ್ ಅನುಮತಿ ನೀಡಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಯಾವ ಸಂದರ್ಭದಲ್ಲಿ ಕಣ್ಣೀರಿಟಿದ್ದರು, ಯಾವ ವಿಚಾರವಾಗಿ 15 ನಿಮಿಷ ಕಾಲ ದುಃಖ ವ್ಯಕ್ತಪಡಿಸಿದ್ದರು ಎಂಬ ಬಗ್ಗೆ ಮಾತ್ರ ದೇವೇಗೌಡರು ಮಾಹಿತಿ ನೀಡಲಿಲ್ಲ.

ಸಭೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಕಡಿದುಕೊಳ್ಳಲು ಪಕ್ಷದ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಉಪ ಚುನಾವಣೆ ಎದುರಿಸುವುದು ಬೇಡ. ಸದ್ಯ ಬಿಬಿಎಂಪಿ ಚುನಾವಣೆ ಬರುತ್ತಿರುವುದರಿಂದ ನಮ್ಮ ಪಕ್ಷದಿಂದಲೇ ಸ್ಪರ್ಧೆ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕಾರ್ಯಕರ್ತರ ಅಭಿಪ್ರಾಯ ಪಡೆದಿರುವ ಎಚ್‍ಡಿಡಿ ನೀವು ಈ ಬಗ್ಗೆ ತಲೆಕೆಡಿಸಿಕೊಳ್ಳುವುದ ಬೇಡ. ಮೈತ್ರಿ ಬಗ್ಗೆ ನಾನು, ಕುಮಾರಸ್ವಾಮಿ ತೀರ್ಮಾನ ಮಾಡುತ್ತೇವೆ. ಇಂದಿನಿಂದಲೇ ಪಕ್ಷ ಸಂಘಟನೆ ಮಾಡಿ. ಚುನಾವಣೆ ಏಕಾಂಗಿಯಾಗಿ ಸ್ಪರ್ಧೆ ಮಾಡೋ ವಿಚಾರ ಮುಂದೆ ನಿರ್ಧಾರ ಮಾಡೋಣ ಎಂದಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *