ನನ್ನ ಮನೆಗೆ ಕೇಂದ್ರ ಸಚಿವ ಗೋಯಲ್ ಬಂದಿದ್ದು ಯಾಕೆ: ದೇವೇಗೌಡ್ರು ವಿವರಿಸಿದ್ರು

Public TV
2 Min Read

ಮೈಸೂರು: ನನ್ನ ಮತ್ತು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಭೇಟಿ ಸೌಜನ್ಯವಾದ ಭೇಟಿ. ಹಾಸನದ ರೈಲ್ವೇ ಯೋಜನೆ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಿದ್ದೆ. ಆದ್ದರಿಂದ ಗೋಯಲ್ ಭೇಟಿಗೆ ಅಪಾರ್ಥ ಬೇಡ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ಪಷ್ಟ ಪಡಿಸಿದ್ದಾರೆ.

ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆದಿ ರಂಗ, ಮಧ್ಯ ರಂಗ ಮತ್ತು ಅಂತ್ಯ ರಂಗದ ದರ್ಶನ ಮಾಡಿದ್ದಾರೆ. ಈ ಮಧ್ಯೆ ಮೈಸೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನನ್ನ ಕೇಂದ್ರ ರೈಲ್ವೇ ಸಚಿವ ಹಾಗೂ ರಾಜ್ಯ ಚುನಾವಣಾ ಸಹ ಉಸ್ತುವಾರಿ ಪಿಯೂಷ್ ಗೋಯಲ್ ಭೇಟಿ ಸೌಜನ್ಯದ ಭೇಟಿಯಾಗಿದೆ. ಹಾಸನದ ರೈಲ್ವೇ ಯೋಜನೆ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಿದ್ದೆ. ನಾನೇ ಅವರು ಇರುವ ಸ್ಥಳಕ್ಕೆ ಹೋಗಬೇಕಿತ್ತು. ಆದರೆ ನಾನು ವಯಸ್ಸಿನಲ್ಲಿ ದೊಡ್ಡವರು ಅನ್ನೋ ಕಾರಣಕ್ಕೆ ಅವರೇ ನಮ್ಮ ಮನೆಗೆ ಬಂದಿದ್ದರು. ನನ್ನ ಅವರ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಇದೇ ವೇಳೆ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಗೌಡರು, ರಾಜ್ಯದ ನೀರಾವರಿ ಯೋಜನೆಗಳ ವಿಚಾರವಾಗಿ ಸಿದ್ದರಾಮಯ್ಯ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ. ಡೋಂಗಿ ವ್ಯವಹಾರಗಳನ್ನು ಬಿಟ್ಟು ನನ್ನ ಜೊತೆ ಹೋರಾಟಕ್ಕೆ ಬರಲಿ. ನೀರಾವರಿ ಯೋಜನೆ ಬಗ್ಗೆ ವಾಸ್ತವವಾಗಿ ಮಾತನಾಡಲಿ ಎಂದರು.

ಕೃಷ್ಣ ನದಿಗೆ ಯೋಜನೆಗಳನ್ನ ರೂಪಿಸಿದವರು ಯಾರು? ದೆಹಲಿಗೆ ಹೋಗಿ ನೀರಾವರಿ ಯೋಜನೆಗಳನ್ನ ಜಾರಿ ಮಾಡಿದ್ದರು ಯಾರು? ಸಿದ್ದರಾಮಯ್ಯನಾ.. ದೇವೇಗೌಡರಾ… ಎಂದು ಪ್ರಶ್ನಿಸಿದ್ದಾರೆ. ನಟ ಸುದೀಪ್ ಜೆಡಿಎಸ್ ಸೇರ್ಪಡೆ ಆಗುತ್ತಾರೆ ಎಂಬ ಬಗ್ಗೆ ಗೌಡರು, ಕುಮಾರಸ್ವಾಮಿ ಅವರೊಂದಿಗೆ ಸುದೀಪ್ ಮಾತನಾಡಿದ್ದಾರೆ. ಆದರೆ ಅವರು ಏನು ನಿರ್ಧಾರ ಮಾಡಿದ್ದಾರೋ ನನಗೆ ಗೊತ್ತಿಲ್ಲ. ನಾನು ಯಾರ ವ್ಯಕ್ತಿತ್ವವನ್ನು ಹಗುರವಾಗಿ ಕಾಣುವುದಿಲ್ಲ. ಸುದೀಪ್ ಅವರೊಂದಿಗೆ ಕುಮಾರಸ್ವಾಮಿ ಮಾತನಾಡಿರೋದು ಸತ್ಯ ಎಂದು ಸ್ಪಷ್ಟನೆ ನೀಡಿದರು.

ನನಗೆ ದೇವರಲ್ಲಿ ಅಪಾರ ನಂಬಿಕೆ ಇದೆ. 1962 ರಲ್ಲಿ ನಾನು ಚುನಾವಣೆ ಗೆದ್ದಿದ್ದು ದೇವರ ಆಶೀರ್ವಾದಿಂದಲೇ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡಲು ಇರೋ ಶಕ್ತಿಯೇ ದೇವರು. ಈ ಹಿನ್ನೆಲೆಯಲ್ಲಿ ಇಂದು ವೈಕುಂಠ ಏಕಾದಶಿಯ ವಿಶೇಷ ಪೂಜೆ ಕೈಗೊಂಡಿದ್ದೇನೆ. ಆದಿ ರಂಗ, ಮಧ್ಯರಂಗ ಮತ್ತು ಅಂತ್ಯರಂಗನ ದರ್ಶನ ಪಡೆದು ಪುಣ್ಯಪ್ರಾಪ್ತಿ ಆಗುತ್ತದೆ ಎಂಬ ಮಾತಿದೆ. ಆದ್ದರಿಂದ ಕುಟುಂಬ ಸಮೇತರಾಗಿ ಮೂರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು. ಇದನ್ನು ಓದಿ: ಹೆಚ್‍ಡಿಡಿ ವಿರುದ್ಧ ರಫ್&ಟಫ್ ವರ್ತನೆ ಬೇಡ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

https://www.youtube.com/watch?v=2jLUoiKpHp4

Share This Article
Leave a Comment

Leave a Reply

Your email address will not be published. Required fields are marked *