ಕರ್ನಾಟಕದಲ್ಲಿ ಸೋಲಿಸುತ್ತೇವೆ, ಕೇಂದ್ರದಲ್ಲೂ ಸೋಲಿಸುತ್ತೇವೆ – ಕೈ, ತೆನೆ ನಾಯಕರ ಗುಡುಗು

Public TV
2 Min Read

– ಕೋಮುವಾದಿ ಶಕ್ತಿಯನ್ನು ದೂರವಿಡಲು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ
– ಮೋದಿಯ ಬಣ್ಣದ ಮಾತಿಗೆ ಬೆಲೆ ನೀಡಬೇಡಿ

ಬೆಂಗಳೂರು: “ಕರ್ನಾಟಕದಲ್ಲಿ ಸೋಲಿಸುತ್ತೇವೆ, ಕೇಂದ್ರದಲ್ಲೂ ಬಿಜೆಪಿಯನ್ನು ಸೋಲಿಸುತ್ತೇವೆ. ಯಾವುದೇ ಅಭಿವೃದ್ಧಿ ಮಾಡದೇ ಮೋದಿ ದೇಶದಲ್ಲಿ ಸುಳ್ಳು ಹೇಳುತ್ತಿದ್ದಾರೆ” ಹೀಗೆ ಹೇಳುವ ಮೂಲಕ ದೋಸ್ತಿ ನಾಯಕರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ನೆಲಮಂಗಲದ ಬಿಇಸಿ ಮೈದಾನದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಸಮಾವೇಶದಲ್ಲಿ ಎರಡೂ ಪಕ್ಷಗಳ ನಾಯಕರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೋಮುವಾದಿ ಶಕ್ತಿಯನ್ನು ದೂರವಿಡಲು ಇಂದು ನಾವೆಲ್ಲ ಒಂದಾಗಿದ್ದೇವೆ. ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಧಾನಿ ಮೋದಿ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಎಲ್ಲ ಜಾತ್ಯಾತೀತರು ಇಂದು ಒಂದಾಗಬೇಕಿದೆ. ಇಂದು ರೈತರು ಪ್ರತಿನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಮೋದಿ ಶ್ರೀಮಂತರಿಗಷ್ಟೇ ಚೌಕಿದಾರ. ದೇಶದಲ್ಲಿ ಉದ್ಯೋಗ ಪ್ರಮಾಣ ಹೆಚ್ಚಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ನರೇಂದ್ರ ಮೋದಿ ತಮ್ಮ ಐದು ವರ್ಷದ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ದಲಿತರು ಭಯದಿಂದ ಬದುಕುವಂತಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

ಮೋದಿ ಮಹಾನ್ ಸುಳ್ಳುಗಾರ: ಲೋಕಸಭಾ ಚುನಾವಣೆ ಸಂಬಂಧ ದೇಶದ ಜನರಿಗೆ ಐಕ್ಯತೆ ಸಂದೇಶ ರವಾನೆ ಮಾಡಲು ಈ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಕಾಂಗ್ರೆಸ್ ನಾಯಕತ್ವದಲ್ಲಿ ಮುಂದಿನ 5 ವರ್ಷ ಅಧಿಕಾರ ನೀಡುವ ಅಗತ್ಯವಿದೆ. ಹಾಗಾಗಿ ಕಾಂಗ್ರೆಸ್ ಬಲಪಡಿಸಲು ನಾಡಿನ ಸಮಗ್ರ ಜನತೆ ಸಹಕರಿಸಬೇಕು. ಮೋದಿ ಬಣ್ಣದ ಮಾತಿಗೆ ಬೆಲೆ ಕೊಡಬಾರದು. ಮೋದಿ ಮಹಾನ್ ಸುಳ್ಳುಗಾರ ಎಂದು ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರರಾಗಿದ್ದು, ವೇದಿಕೆ ಮೇಲೆ ಮಾತನಾಡುವುದು ಎಲ್ಲವೂ ಸುಳ್ಳು. ತಮ್ಮ ಆಡಳಿತಾವಧಿಯಲ್ಲಿ ಮೋದಿ ಪ್ರಧಾನಿಯಾಗಿ ರೈತರ ಪರವಾಗಿ ಮಾತನಾಡಲಿಲ್ಲ. ತಮಿಳುನಾಡಿನ ರೈತರು ಅರೆಬೆತ್ತಲೆಯಾಗಿ ದೆಹಲಿಯಲ್ಲಿ ಧರಣಿ ಮಾಡಿದರೂ ಬೆಲೆ ಕೊಡಲಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯೂ ಸಮರ್ಪಕವಾಗಿ ರೈತರಿಗೆ ತಲುಪಿಲ್ಲ. ರಾಜ್ಯದ ರೈತರ ಸಂಪೂರ್ಣ ಮಾಹಿತಿ ನೀಡಿದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಮತ್ತೊಮ್ಮೆ ಸಂದೇಶ ರವಾನೆ: ಮೇ.23 ರಂದು 21 ಪ್ರಾದೇಶಿಕ ಪಕ್ಷಗಳು ಮೊದಲ ಬಾರಿ ಸೇರಿದ ಬಳಿಕ ಮಹಾಘಟಬಂಧನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದ್ದರಿಂದಲೇ ಕೆಟ್ಟ ಪದಗಳಿಂದ ಮಹಾಘಟಬಂಧನ ಬಗ್ಗೆ ಟೀಕೆ ಮಾಡಿದರು. ಮೋದಿಗೆ ಅವರಿಗೆ ಎಲ್ಲವನ್ನು ನಾನೇ ಮಾಡಿದ್ದೇನೆ ಎಂಬ ಭಾವನೆ ಇದೆ. ಆದರೆ ಇಂದಿನ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ದೇಶಕ್ಕೆ ಸಂದೇಶ ರವಾನೆ ಆಗಲು ಈ ಸಭೆ ಆಯೋಜಿಸಲಾಗಿದೆ. ಅಂದು ಕರ್ನಾಟಕದಲ್ಲಿ ಉದ್ಭವವಾದ ಹೊಸ ಶಕ್ತಿ ಇಂದಿಗೂ ಮುಂದುವರಿಯುತ್ತಿದೆ. ಎಲ್ಲಾ ಧರ್ಮಗಳನ್ನು ಒಟ್ಟುಗೂಡಿಸಿ ತೆಗೆದುಕೊಂಡು ಹೋಗುತ್ತೇವೆ. ಸಂವಿಧಾನ ರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತೇವೆ. ಜಮ್ಮು ಕಾಶ್ಮೀರದಲ್ಲಿ 144 ಸೆಕ್ಷನ್ ಜಾರಿ ಆಗಲು ಬಿಜೆಪಿಯೇ ಕಾರಣವಾಗಿದ್ದು, ಶಾಂತಿ ನಾಶ ಆಗಲು ಕೂಡ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಹೇಗೆ ಅಭಿವೃದ್ಧಿ ಮಾಡಲಾಗುತ್ತದೆ ಎಂಬ ಉದಾಹಣೆಯನ್ನು ನೀಡುವ ಮೂಲವ ಸಂದೇಶ ರವಾನೆ ಮಾಡಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹೇಳಿದರು.

ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಶಾಸಕರು, ನಾಯಕರು ಹಾಗು ಕಾರ್ಯಕರ್ತರು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *