ಸೋನಿಯಾ, ರಾಹುಲ್ ಗಾಂಧಿ ಬರೆದುಕೊಟ್ಟಿದ್ದಾರೆ – ಕುಮಾರಸ್ವಾಮಿಯೇ 5 ವರ್ಷ ಸಿಎಂ

Public TV
1 Min Read

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಹಾಗೂ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬರೆದುಕೊಟ್ಟಿದ್ದು, ಎಚ್‍ಡಿ ಕುಮಾರಸ್ವಾಮಿ ಅವರೇ 5 ವರ್ಷ ಸಿಎಂ ಆಗಿರುತ್ತಾರೆ ಎಂದು ಪ್ರಧಾನಿ ಎಚ್‍ಡಿ ದೇವೇಗೌಡರು ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಮಾತನಾಡಿದ ಅವರು, ನಾನು ದೈವದಲ್ಲಿ ಯಾವಾಗಲೂ ನಂಬಿಕೆ ಇಟ್ಟಿದ್ದೇನೆ. ರಾಜ್ಯದಲ್ಲಿ ಮೂರೇ ಪಕ್ಷ ಇರುವುದರಿಂದ ವರ್ಷದ ಹಿಂದಿನ ಚುನಾವಣೆ ವೇಳೆ ಊಹೆ ಮಾಡಿ ಎಚ್‍ಡಿಕೆ ಸಿಎಂ ಆಗುತ್ತಾರೆ ಎಂದು ಹೇಳಿದ್ದೆ. ಇಂದು ದೈವ ಬಲದಿಂದ ಸಿಎಂ ಆಗಿದ್ದಾರೆ. ಎಚ್‍ಡಿ ಕುಮಾರಸ್ವಾಮಿ ಅವರು ಸಿಎಂ ಆದ ಸಮಯದಿಂದಲೂ 2 ಪಕ್ಷಗಳ ನಡುವೆ ಅಲ್ಪ ಪ್ರಮಾಣದಲ್ಲಿ ಅಸಮಾಧಾನ ಇದೆ. ಆದರೆ ಇದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಆಗಲ್ಲ. ಸೋನಿಯಾ, ರಾಹುಲ್ ಗಾಂಧಿ ಅವರು ಲಿಖಿತ ರೂಪದಲ್ಲೇ ಬೆಂಬಲ ನೀಡಿರುವುದಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು. ಈ ವೇಳೆ ಹೊರಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಸ್ವತಃ ಬಲದಿಂದ ಅಧಿಕಾರ ಪಡೆಯುವುದು ಕಷ್ಟ. ಆದ್ದರಿಂದ ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರೀಯ ಪಕ್ಷಗಳು ಸಹಕಾರ ಕೊಡಬೇಕು. ಐಕ್ಯತೆ ಇಲ್ಲದಿದ್ದರೆ ಮತ ಸೃಷ್ಟಿಯಾಗಲ್ಲ. ಈ ಸಂದರ್ಭದಲ್ಲಿ ಮೋದಿಯವರಿಗೆ ಅಥವಾ ಕಾಂಗ್ರೆಸ್ ಗೆ ಇಷ್ಟೇ ಸೀಟು ಬರುತ್ತವೆ ಎಂದು ನಿಖರವಾಗಿ ಹೇಳುವುದು ಕಷ್ಟ ಇದೆ. 23 ರಂದು ಫಲಿತಾಂಶ ವಿಳಂಬ ಆಗಲಿದೆ. ಕಳೆದ ಬಾರಿ ಮೋದಿಯವರಿಗೆ ಹೆಚ್ಚು ಸ್ಥಾನಗಳು ಬಂದಿದ್ದು, ವಾಜಪೇಯಿ, ನರಸಿಂಹರಾವ್ ಅವರ ಕಾಲದಲ್ಲೂ ಅಷ್ಟು ಸೀಟುಗಳು ಯಾರಿಗೂ ಬಂದಿರಲಿಲ್ಲ. ಫಲಿತಾಂಶದ ಬಳಿಕ ಎಲ್ಲವೂ ಸ್ಪಷ್ಟ ಆಗಲಿದೆ ಎಂದರು.

ಇದಕ್ಕೂ ಮುನ್ನ 87ನೇ ವರ್ಷ ನನಗೆ ಇಂದು ಆರಂಭವಾಗುತ್ತಿದೆ. ಕಳೆದ 40 ವರ್ಷಗಳಿಂದ ವೆಂಕಟೇಶ್ವರನ ಪೂಜೆ ಮಾಡಿಕೊಂಡು ಬಂದಿದ್ದು, ಇವತ್ತು ಬೆಳಗ್ಗೆ ತಿರುಪತಿಯಿಂದ ವಾಪಸ್ ಬಂದಿದ್ದೇನೆ. ಅಭಿಮಾನಿಗಳ ಆಸೆಯಂತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದೇನೆ ಅಷ್ಟೇ. ಹುಟ್ಟುಹಬ್ಬದ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು ಎಂದರು.

Share This Article
Leave a Comment

Leave a Reply

Your email address will not be published. Required fields are marked *