ರಾಜ್ಯದಲ್ಲಿ ಎರಡು ಅಂಕಿ ದಾಟಲು ಬಿಜೆಪಿಯನ್ನ ಬಿಡಲ್ಲ: ಎಚ್‍ಡಿಡಿ ಶಪಥ

Public TV
4 Min Read

– ಅಮಿತ್ ಶಾ ಬಿಜೆಪಿ ಕಾರ್ಯಕರ್ತರಿಗೆ ನಡವಳಿಕೆ ಪಾಠ ಹೇಳಿಕೊಡಲಿ
– ಕೋಮುಶಕ್ತಿಯನ್ನು ತಡೆಯಲು ನಾವು ಒಂದಾಗಿದ್ದೇವೆ
– 20-8 ಸೀಟು ಹಂಚಿಕೆಯೇ ಅಂತಿಮ

ಬೆಂಗಳೂರು: ನಮ್ಮ ಹೋರಾಟ, ಗುರಿ ಬಿಜೆಪಿಯನ್ನು ಸೋಲಿಸುವುದಾಗಿದೆ. ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸುವುದು ನಮ್ಮ ಗುರಿ. ಎರಡು ಅಂಕಿ ದಾಟಲು ಬಿಜೆಪಿಯನ್ನು ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶಪಥ ಮಾಡಿದ್ದಾರೆ.

ನಗರದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ನಾಮಪತ್ರ ಸಲ್ಲಿಕೆ ಇವತ್ತು ಪ್ರಾರಂಭ ಆಗಿದೆ. ಸಮಯ ಬಹಳ ಕಡಿಮೆ ಇದೆ. ನಮಗೆ ಹಂಚಿಕೆಯಾದ ಕ್ಷೇತ್ರದಲ್ಲಿ ನಾವು ಪ್ರಚಾರ ಮಾಡುತ್ತೇವೆ. ಜೊತೆಗೆ ಎರಡೂ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯವನ್ನು ತಕ್ಷಣವೇ ಸರಿಪಡಿಸುತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ರಮಕೈಗೊಂಡಿದ್ದೇವೆ ಎಂದರು. ಇದನ್ನು ಓದಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಗೆಲ್ಲುವುದು ನಮ್ಮ ಗುರಿ: ಎಚ್‍ಡಿಕೆ

ದೋಸ್ತಿ ಸರ್ಕಾರದ ಶಾಸಕರು, ಕಾರ್ಯಕರ್ತರು ಭಿನ್ನಮತ ಮಾತುಗಳನ್ನ ಯಾರು ಆಡಬಾರದು. ಎರಡು ಪಕ್ಷದ ನಾಯಕರು ಕುಳಿತು ಎಲ್ಲಾ ಪರಿಹಾರ ಮಾಡಿಕೊಳ್ಳಬೇಕು. ಮೈತ್ರಿ ಪಕ್ಷದ ಬಗ್ಗೆ ಯಾರು ಬಹಿರಂಗವಾಗಿ ಮಾತಾಡಬಾರದು ಎಂದು ದೋಸ್ತಿ ನಾಯಕರಿಗೆ ದೇವೇಗೌಡರು ಎಚ್ಚರಿಕೆ ಕೊಟ್ಟರು.

ಯಾವುದೇ ಸಮಸ್ಯೆ ಇದ್ದರೂ ಚುನಾವಣೆಯಾದ ಮೇಲೆ ಚರ್ಚೆ ಮಾಡೋಣ. ಕೋಮುಶಕ್ತಿಯನ್ನು ತಡಿಯುವುದು ನಮ್ಮ ಉದ್ದೇಶ. ಯಾವುದೇ ಕ್ಷೇತ್ರದಲ್ಲಿ ಬಿಕ್ಕಟ್ಟು ಇದ್ದರು ಸರಿ ಮಾಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ಭಿನ್ನಮತ ಸಾಧ್ಯವಾಗುವುದಿಲ್ಲ ಅಂತ ಮಾಧ್ಯಮಗಳು ಅಂದುಕೊಂಡರೆ ಕಾದು ನೋಡಿ ಎಂದು ಅಸಮಾಧಾನ ಹೊರಹಾಕಿದರು. ಇದನ್ನು ಓದಿ: ಮೋದಿ ಸರ್ಕಾರವನ್ನು ಉರುಳಿಸಲು ತಮ್ಮ ಪ್ರಚಾರ ತಂತ್ರವನ್ನು ತಿಳಿಸಿದ ದೋಸ್ತಿಗಳು

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಎಷ್ಟೇ ಕೆಲಸ ಇದ್ದರು ಮಾರ್ಚ್ 31ರಂದು ನಡೆಯುವ ಸಮಾವೇಶಕ್ಕೆ ಬರುತ್ತಾರೆ. ಈ ಬೃಹತ್ ಸಮಾವೇಶ ಇಡೀ ದೇಶಕ್ಕೆ ಸಂದೇಶ ಕೊಡುತ್ತದೆ. ನಾವು ಇವತ್ತು ಹೇಳಿರೋದನ್ನ ಕಾರ್ಯರೂಪಕ್ಕೆ ತಂದು ತೋರಿಸುತ್ತೇವೆ. ಸೀಟು ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. 20-8 ಹಂಚಿಕೆಯೇ ಅಂತಿಮ ಎಂದರು.

ಯಾರು ಯಾರು ಎಲ್ಲಿ ಪ್ರಚಾರ ಮಾಡುವುದು ಅಂತ ನಾವು ತೀರ್ಮಾನ ಮಾಡುತ್ತೇವೆ. ಮಾಧ್ಯಮದ ಚರ್ಚೆಗೆ ಹೋಗುವವರು ಎರಡು ಪಕ್ಷದಿಂದ ಒಬ್ಬರು ಮಾತ್ರ ಹೋಗಬೇಕು. ಈ ಬಗ್ಗೆ ಇವತ್ತಿನ ಸಭೆಯಲ್ಲಿ ಒಪ್ಪಂದ ಆಗಿದೆ. ಐಕ್ಯತೆಯಾಗಿ ಒಬ್ಬರು ಮಾತ್ರ ಚರ್ಚೆಗೆ ಹೋಗಬೇಕು ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಧನೆ, ಸಮ್ಮಿಶ್ರ ಸರ್ಕಾರದ ಸಾಧನೆ ಇಟ್ಟುಕೊಂಡು ನಾವು ಜನರ ಮುಂದೆ ಹೋಗುತ್ತೇವೆ. ಜನರು ಪ್ರಬುದ್ಧರಾಗಿದ್ದಾರೆ. ಇದೆಲ್ಲವನ್ನು ಒಪ್ಪುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಮಹಾಘಟಬಂಧನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲಘುವಾಗಿ ಮಾತನಾಡುತ್ತಾರೆ. 15 ರಾಜ್ಯಗಳಲ್ಲಿ ಮೈತ್ರಿ ಆಧಾರದ ಮೇಲೆ ಬಿಜೆಪಿ ಸರ್ಕಾರ ಅಧಿಕಾರ ಮಾಡುತ್ತಿದೆ. ಇದರ ಅರಿವಿಲ್ಲದೆ ಮೋದಿ ಮಾತನಾಡುತ್ತಾರೆ. ನಮ್ಮ ಐಕ್ಯತೆ ಮೂಲಕ ಮೋದಿಗೆ ಉತ್ತರ ಕೊಡುತ್ತೇವೆ ಎಂದು ಕಿಡಿಕಾರಿದರು.

ಚುನಾವಣಾ ಸ್ಪರ್ಧೆಯಿಂದ ದೇವೇಗೌಡ ಹಿಂದಕ್ಕೆ..?
ಪಾರ್ಲಿಮೆಂಟ್‍ಗೆ ನನ್ನ ಅಗತ್ಯ ಇದೆಯ ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ. ಸಂಸತ್ ಭಾಷಣದಲ್ಲಿ ಕೊನೆ ಚುನಾವಣೆ ಅಂತ ಹೇಳಿದ್ದೆ. ಆದರೆ ಸ್ಪರ್ಧಿಸುವಂತೆ ಸ್ನೇಹಿತರು ಒತ್ತಾಯ ಮಾಡುತ್ತಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ನಾನು ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ. ದೆಹಲಿಯಲ್ಲಿ ನನ್ನ ಅವಶ್ಯಕತೆ ಎಷ್ಟು ಇದೆ ಅಂತ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದರು.

ಹಾಸನ ಲೋಕಸಭಾ ಕ್ಷೇತ್ರ ಪ್ರಜ್ವಲ್ ರೇವಣ್ಣಗೆ ಅಂತ ಮೂರು ವರ್ಷದ ಹಿಂದೆಯೇ ನಾನು ಹೇಳಿದ್ದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಸನ ಪ್ರಜ್ವಲ್‍ಗೆ ಫಿಕ್ಸ್ ಆಗಿದೆ. ದೆಹಲಿಯಿಂದಲೂ ನಿಲ್ಲಲು ಹಲವರು ಹೇಳಿದ್ದಾರೆ. ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡುತ್ತೇನ ಎಂದು ಹೇಳಿದರು.

ಉಡುಪಿಯಲ್ಲಿ ಜಯಪ್ರಕಾಶ ಹಗ್ಡೆ, ಮಧ್ವರಾಜ್ ಸೇರಿದಂತೆ ಹಲವರ ಹೆಸರು ಇದೆ. ಅಂತಿಮ ಅಭ್ಯರ್ಥಿಯ ಬಗ್ಗೆ ಅಂತಿಮ ತೀಮಾನ ಕೈಗೊಳ್ಳುತ್ತೇವೆ ಎಂದರು.

ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಬಂಧನದ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಯಾರನ್ನು ಬಂದನ ಮಾಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ. ಬಿಜೆಪಿ, ಆರ್‍ಎಸ್‍ಎಸ್‍ನ ಕೆಲವರು ಹೀಗೆ ಘೋಷಣೆ ಕೂಗಿದ್ದಾರೆ. ಈ ಪದ್ಧತಿ ಸರಿಯಲ್ಲ. ಪ್ರಧಾನಿ ಮೋದಿ ಬಂದಾಗ ನಾವು ಹೀಗೆ ಮಾಡಬಹುದು. ಆದರೆ ಇಂತಹ ವರ್ತನೆ ಸರಿಯಾದ ವ್ಯವಸ್ಥೆ ಅಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೊದಲು ತಮ್ಮ ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಅಂತ ಹೇಳಿಕೊಡಲಿ. ಬೇರೆ ಪಕ್ಷದ ಕಾರ್ಯಕ್ರಮ ನಡೆಯುವಾಗ ಹೀಗೆ ಮಾಡುವುದು ಎಷ್ಟು ಸರಿ ಎಂದು ಅಸಮಾಧಾನ ಹೊರ ಹಾಕಿದರು.

ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಈ ಕುರಿತು ಮನವಿ ಮಾಡಿದ್ದೇವೆ. ಇಲ್ಲಿಂದ ಸ್ಪರ್ಧೆ ಮಾಡಿದರೆ ಹೆಚ್ಚು ಸ್ಥಾನ ಗೆಲ್ಲುವ ಅವಕಾಶವಿದೆ. ಅಂತಿಮವಾಗಿ ಎಲ್ಲಿ ಸ್ಪರ್ಧೆ ಮಾಡಬೇಕು ಅಂತ ರಾಹುಲ್ ಗಾಂಧಿ ನಿರ್ಧಾರ ಮಾಡುತ್ತಾರೆ ಎಂದರು.

ದೋಸ್ತಿ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಡಿಕೆ ಶಿವಕುಮಾರ್ ಹಾಗೂ ಕುಪ್ಪೇಂದ್ರ ರೆಡ್ಡಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *