ರೇವಣ್ಣಗೆ ಇಲ್ಲ ಇಂಧನ ಖಾತೆ- ಕೊನೆಗೂ ಗೆದ್ದ ಡಿಕೆ ಶಿವಕುಮಾರ್?

Public TV
2 Min Read

ಬೆಂಗಳೂರು: ಫುಟ್‍ಬಾಲ್ ಆಡಲ್ಲ, ನಾನು ಚೆಸ್ ಪ್ಲೇಯರ್. ಚೆಸ್ ಆಡಿ ಚೆಕ್ ಕೊಡುವವನು ಎಂದು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ತೋರಿಸಿದ್ದ ಡಿಕೆಶಿ ಕೊನೆಗೂ ತಮ್ಮ ಪ್ರೀತಿಯ ಇಂಧನ ಖಾತೆಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು. ಇಂಧನ ಖಾತೆಗಾಗಿ ಎಚ್‍ಡಿ ರೇವಣ್ಣ ಮತ್ತು ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದರು. ಇಬ್ಬರು ಘಟಾನುಘಟಿ ನಾಯಕರಾದ ಕಾರಣ ಇಬ್ಬರ ಮನ ಒಲಿಸುವುದು ಕಷ್ಟವಾಗಿತ್ತು. ಈ ಮಧ್ಯೆ ರೇವಣ್ಣ ಅವರು ಇಂಧನದ ಜೊತೆ ಪಿಡಬ್ಲ್ಯೂಡಿ ಖಾತೆಯನ್ನು ನೀಡುವಂತೆ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಪಟ್ಟು ಹಿಡಿದಿದ್ದರು.

ರೇವಣ್ಣ ಎರಡು ಖಾತೆಗೆ ಪಟ್ಟು ಹಿಡಿದಿದ್ದು ಜೆಡಿಎಸ್ ನವರಿಗೆ ತಲೆನೋವಾಗಿತ್ತು. ಇಂದು ಎಚ್‍ಡಿ ದೇವೇಗೌಡರು ಮಗ ರೇವಣ್ಣ ಅವರನ್ನು ಮನ ಒಲಿಸಿದ್ದಾರೆ. ಪರಿಣಾಮ ಡಿಕೆ ಶಿವಕುಮಾರ್ ಅವರಿಗೆ ಇಂಧನ ಖಾತೆಯನ್ನು ಬಿಟ್ಟುಕೊಡಲು ರೇವಣ್ಣ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಸೋಮವಾರ ದೇವೇಗೌಡರು ತಮ್ಮ ನಿವಾಸದಲ್ಲಿ ಮೂರು ಗಂಟೆ ನಡೆಸಿದ ಮಾತುಕತೆ ಕೊನೆಗೂ ಫಲಪ್ರದವಾಗಿದೆ. ದೇವೇಗೌಡರ ನಿರ್ಧಾರದಂತೆ ಡಿಕೆ ಶಿವಕುಮಾರ್ ಅವರಿಗೆ ಇಂಧನ ಖಾತೆ ಹಾಗೂ ರೇವಣ್ಣ ಅವರಿಗೆ ಲೋಕೋಪಯೋಗಿ ಖಾತೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.

ಸಂಧಾನದ ವೇಳೆ ದೇವೇಗೌಡರು ಒಕ್ಕಲಿಗ ಒಗ್ಗಟ್ಟಿನ ಬಗ್ಗೆ ಪ್ರಸ್ತಾಪ ಮಾಡಿದ್ದು, ಎರಡು ಖಾತೆಗಳು ಒಬ್ಬರೇ ಪಡೆದರೆ ಒಕ್ಕಲಿಗ ಸಮುದಾಯದಿಂದ ಉತ್ತಮ ಸಂದೇಶ ರವಾನೆಯಾಗುವುದಿಲ್ಲ. ಅಲ್ಲದೇ ಡಿಕೆ ಶಿವಕುಮಾರ್ ಅವರ ಶಕ್ತಿಯನ್ನು ಲಘುವಾಗಿ ಪರಿಗಣಿಸಬಾರದು. ಎರಡು ಖಾತೆಗಳನ್ನು ನೀಡುವುದರಿಂದ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬುವುದನ್ನು ರೇವಣ್ಣ ಅವರಿಗೆ ಮನವರಿಗೆ ಮಾಡಿಕೊಟ್ಟಿದ್ದಾರೆ.

8 ಜನರಿಷ್ಟೇ ಸಚಿವ ಸ್ಥಾನ: ಇದೇ ವೇಳೆ ಜೆಡಿಎಸ್‍ನ ಎಂಟು ನಾಯಕರಿಗೆ ಮಾತ್ರ ಸಚಿವ ಸ್ಥಾನ ನೀಡಲು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಉಳಿದ ಮೂರು ಸಚಿವ ಸ್ಥಾನಗಳನ್ನು ಹಾಗೆಯೇ ಉಳಿಸಿಕೊಳ್ಳುವ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಇದನ್ನು ಓದಿ: ಮುಜರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ಕೊಂಡು ಇರ್ತೀನಿ – ಡಿಕೆಶಿ

ಸದ್ಯ ಜಿಲ್ಲಾ ಹಾಗೂ ಜಾತಿವಾರು ಸಚಿವ ಸ್ಥಾನವನ್ನು ಹಂಚಿಕೆ ಮಾಡಲು ದೇವೇಗೌಡ ಅವರು ನಿರ್ಧರಿಸಿದ್ದು, ಈ ಸೂತ್ರದಲ್ಲಿ ಒಕ್ಕಲಿಗ ಸಮುದಾಯವನ್ನು ದೂರ ಉಳಿಸಿದ್ದಾರೆ ಎನ್ನಲಾಗಿದೆ. ಇದರಂತೆ ಮೈಸೂರು, ಮಂಡ್ಯ, ಹಾಸನ, ತುಮಕೂರು ಜಿಲ್ಲೆಗೆ ತಲಾ ಒಂದು ಸಚಿವ ಸ್ಥಾನ ಲಭಿಸಲಿದ್ದು, ಎಸ್‍ಸಿ ಮತ್ತು ಎಸ್‍ಟಿ, ಲಿಂಗಾಯತ, ಕುರುಬ ಸಮುದಾಯದಗಳಿಗೆ ತಲಾ ಒಂದು ಸ್ಥಾನ ನೀಡಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಆದರೆ ಮೊದಲ ಪಟ್ಟಿಯಲ್ಲಿ ಅಲ್ಪಸಂಖ್ಯಾತರಿಗೆ ಸ್ಥಾನದ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎನ್ನಲಾಗಿದೆ. ಇದನ್ನು ಓದಿ: ನಾನು ಫುಟ್ಬಾಲ್ ಆಡೋನಲ್ಲ, ಚೆಸ್ ಆಡಿ ಚೆಕ್ ಕೊಡುವವನು: ಹೈಕಮಾಂಡ್‍ಗೆ ಡಿಕೆಶಿ ಟಾಂಗ್

ಇಂಧನ ಖಾತೆ ಸೇರಿದಂತೆ ನಾನು ಯಾವುದೇ ಖಾತೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಎಚ್‍ಡಿ ರೇವಣ್ಣ ಜೊತೆ ಮಾತುಕತೆ ನಡೆಸಿಲ್ಲ. ಅವರು ದೊಡ್ಡ ಕುಟುಂಬದ ಮಕ್ಕಳು. ರೇವಣ್ಣ ಜೊತೆ ಮಾತನಾಡಲು ನನಗೆ ಹುಚ್ಚು ಹಿಡಿದಿಲ್ಲ. ಅವರು ದೊಡ್ಡ ನಾಯಕರು ಎಂದು ಡಿಕೆಶಿ ಶುಕ್ರವಾರ ಪ್ರತಿಕ್ರಿಯಿಸಿದ್ದರು. ಇದನ್ನು ಓದಿ: ಡಿಕೆಶಿಯನ್ನು ಸಮಾಧಾನಪಡಿಸಲು ಮುಂದಾದ ಹೈಕಮಾಂಡ್!

Share This Article
Leave a Comment

Leave a Reply

Your email address will not be published. Required fields are marked *