ನಮ್ಮ ಹತ್ರನೂ ಸೆಕೆಂಡ್ ಆಪ್ಶನ್ ಇದೆ- `ಕೈ’ಕಮಾಂಡ್‍ಗೆ ಎಚ್‍ಡಿಡಿ ಎಚ್ಚರಿಕೆ

Public TV
2 Min Read

ಬೆಂಗಳೂರು: ಸಚಿವ ಸ್ಥಾನಕ್ಕೆ ಎನ್ ಮಹೇಶ್ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರು, ನಿಮ್ಮವರು ಆಟ ಆಡಲು ಶುರು ಮಾಡಿದ್ರೆ ನಮ್ಗೆ ಗೇಮ್ ಬದಲಾಯಿಸೋದಕ್ಕೆ ಬರುತ್ತೆ ಅಂತ ಹೇಳಿರುವುದು ಇದೀಗ ಕೈ ನಾಯಕರನ್ನೇ ನಡುಗಿಸಿದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಗೂ ಮುನ್ನ ಸಂಪುಟ ವಿಸ್ತರಣೆ ಮಾಡಿದ್ರೆ ಸರ್ಕಾರ ಬಿದ್ದು ಆಗುತ್ತದೆ. ಹಾಗಾಗಿ ನಾವು ಹೇಳಿದಂತೆ ಕೇಳಿ, ನಿಮ್ಮ ರಾಜ್ಯ ನಾಯಕರ ಮಾತು ಕೇಳಬೇಡಿ ಅಂತ ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್‍ಗೆ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.

ನಿಮ್ಮ ಸಹವಾಸದಿಂದ ನಮ್ಮ ಶಕ್ತಿ ಹೆಚ್ಚಲ್ಲ, ಆದ್ರೆ ನಿಮಗೆ ನಾವು ಅನಿವಾರ್ಯ ಎನ್ನುವುದು ನೆನಪಿರಲಿ. ನಂಬರ್ ನಿಮ್ಮದು ಜಾಸ್ತಿ ಇರಬಹುದು. ಆದ್ರೆ ನಮ್ ನಂಬರ್ ಇಲ್ಲದೇ ನೀವು ಇಲ್ಲ. ಲೋಕಸಭೆ ಚುನಾವಣೆ ತನಕ ನಿಮ್ಮ ಶಾಸಕರು, ನಿಮ್ಮ ನಾಯಕರು ಬಾಯಿಮುಚ್ಚಿಕೊಂಡು ಇರಲಿ. ನಮಗೆ ಈಗಲೂ ಮೋದಿ ಅವರ ಜತೆ ಸಂಬಂಧ ಚೆನ್ನಾಗಿದೆ. ಆದರೆ ನಮಗೆ ಸಿದ್ಧಾಂತ ಮುಖ್ಯವಾಗಿದೆ ಅಂತ ಕಾಂಗ್ರೆಸ್ ಹೈಕಮಾಂಡ್ ಮುಂದೆ ಚದುರಾಂಗದಾಟದ ದಾಳವನ್ನ ಉರುಳಿಸಿ ಗೌಡರು ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.

ಕಳೆದ ಕೆಲ ದಿನಗಳಿಂದ ಸಂಪುಟ ವಿಸ್ತರಣೆ ಆಗಬೇಕೆಂದು ಕೆಲ ಕಾಂಗ್ರೆಸ್ ಶಾಸಕರು ರಾಜ್ಯದ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ನಡುವೆ ದೊಡ್ಡ ಗೌಡರ ಒಂದೇ ಒಂದು ಸೆಕೆಂಡ್ ಆಪ್ಶನ್ ಮಾತಿಗೆ ಕೈ ಹೈಕಮಾಂಡ್ ತಳಮಳವಾಗಿದ್ದು, ದೇವೇಗೌಡರ ಚದುರಾಂಗದಾಟಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಶರಣಾದ್ರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಕೆಲದಿನಗಳ ಹಿಂದೆ ದೇವೇಗೌಡರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ್ದಾರೆ. ಅಭಿವೃದ್ಧಿ ನೆಪದಲ್ಲಿ ಎಚ್‍ಡಿಡಿ ಹಾಗೂ ರೇವಣ್ಣ ಭೇಟಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುವ ಮೂಲಕ ಕಾಂಗ್ರೆಸ್‍ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

ಈ ಹಿಂದೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಚಿಕಿತ್ಸೆಗೆ ಎಂದು ಧರ್ಮಸ್ಥಳದ ಶಾಂತಿವನಕ್ಕೆ ತೆರಳಿದ ಸಮಯದಲ್ಲಿ ಕೆಲ ಆಡಿಯೋ ಬಹಿರಂಗವಾಗಿತ್ತು. ಇದಾದ ಬಳಿಕ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ನಲ್ಲಿ ದೂರು ನೀಡಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಗೌಡರ ವಾರ್ನಿಂಗ್‍ನಿಂದಾಗಿ ಹೈಕಮಾಂಡ್ ನೀಡಿದ ಸೂಚನೆಯಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಲೆಂಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *