ಸಿನಿಮಾ ಎಲ್ಲಾ ಬೇಡ ಅಂತ ನಿಖಿಲ್‍ಗೆ ಹೇಳಿದ್ದೇನೆ: ಎಚ್‍ಡಿಡಿ

Public TV
2 Min Read

– ಆರ್‌ಎಸ್‌ಎಸ್, ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಬಂದಿವೆ

ಬೆಂಗಳೂರು: ಸಿನಿಮಾ ಎಲ್ಲಾ ಬೇಡ ಅಂತ ನಿಖಿಲ್ ಕುಮಾರಸ್ವಾಮಿಗೆ ಹೇಳಿದ್ದೇನೆ. ಅವನು ಕೂಡ ಡಬ್ಬಿಂಗ್ ಮುಗಿಸುವುದಾಗಿ ಮನವಿ ಮಾಡಿಕೊಂಡಿದ್ದಾನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಸಂಸದನಾಗಿದ್ದಾನೆ. ಅವನನ್ನು ರಾಜ್ಯ ರಾಜಕಾರಣಕ್ಕೆ ತರುವ ಬಗ್ಗೆ ಚರ್ಚೆ ಮಾಡಿಲ್ಲ. ಪ್ರಜ್ವಲ್ ಹಾಸನ ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾನೆ. ನಿಖಿಲ್ ಕುಮಾರಸ್ವಾಮಿಗೆ ಯುವ ಜೆಡಿಎಸ್ ಜವಾಬ್ದಾರಿ ನೀಡಿದ್ದೇವೆ. ಅದಕ್ಕೆ ಸಂಬಂಧಿಸಿದ ಕೆಲಸ ಮಾತ್ರ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಮಾಹಿತಿಯನ್ನು ನಾನು ಪಡೆಯುತ್ತಿದ್ದೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಎಲ್ಲವನ್ನೂ ಪ್ರತಿ ದಿನ ಗಮನಿಸುತ್ತಿದ್ದೇನೆ. ಈಗಲೇ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ದೋಸ್ತಿ ಮುಂದುವರಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಉಪ ಚುನಾವಣೆ ಕುರಿತು ಕಾಂಗ್ರೆಸ್ ನಾಯಕರು ಗುರುವಾರ ಸಭೆ ನಡೆಸಿದರು. ಅದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ತೀರ್ಪು ಬಂದ ಬಳಿಕ ನಡೆಯುವ 17 ಕ್ಷೇತ್ರಗಳ ಉಪ ಚುನಾವಣೆಗೆ ಮೈತ್ರಿ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಪಣ ತೊಟ್ಟಿರುವುದಾಗಿ ಹೇಳಿದ್ದರು. ಪಾಟ್ನಾದಲ್ಲಿ ಅವರು ಭಾಷಣ ಮಾಡಿದಾಗ ಆರ್‌ಎಸ್‌ಎಸ್ ಮೀಸಲಾತಿ ತೆಗೆದುಹಾಕಬೇಕು ಅಂತ ಒತ್ತಾಯ ಮಾಡಿತ್ತು. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಹಲವಾರು ಭಿನ್ನಾಭಿಪ್ರಾಯಗಳು ಬಂದಿವೆ. 16ನೇ ಲೋಕಸಭೆ ಮುಗಿಯುಲು ಆರು ದಿನ ಇದ್ದಾಗ ಮೀಸಲಾತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಾಯಿತು. ಮೇಲ್ಜಾತಿ ಬಡವರಿಗೆ ಮೀಸಲಾತಿ ನೀಡಲು ತೀರ್ಮಾನ ಮಾಡಿದರು ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಸಣ್ಣ ಸಣ್ಣ ಸಮುದಾಯಕ್ಕೂ ಸರ್ಕಾರ ಹಣ ಮೀಸಲಿಟ್ಟಿದ್ದರು. ಸವಿತಾ ಸಮಾಜಕ್ಕೂ 20 ಲಕ್ಷ ರೂ. ಅನುದಾನ ನೀಡಿದ್ದರು. ಹೀಗಾಗಿ ಅದನ್ನು ನೆನೆದು ಸವಿತಾ ಸಮಾಜದವರು ಇಂದು ಪಕ್ಷಕ್ಕೆ ಸೇರಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *