ಕಾಂಗ್ರೆಸ್ ನಿರ್ಧಾರದ ಮೇಲೆ ಉಪ ಚುನಾವಣೆಯಲ್ಲಿ ದೋಸ್ತಿ: ಎಚ್‍ಡಿಡಿ

Public TV
2 Min Read

ಬೆಂಗಳೂರು: ಉಪ ಚುನಾವಣೆಯ ಮೈತ್ರಿಯು ಕಾಂಗ್ರೆಸ್ ನಿರ್ಧಾರದ ಮೇಲೆ ನಿಂತಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರ ರಾಜೀನಾಮೆಯಿಂದ 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಪೈಕಿ ಜೆಡಿಎಸ್ 3 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಹೀಗಾಗಿ ದೋಸ್ತಿ ಸಂಬಂಧ ಮಾತನಾಡಲು ಕಾಂಗ್ರೆಸ್ ನಾಯಕರು ಬಂದಿದ್ದರು. ಒಟ್ಟಾಗಿ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆ ಮಾಡಿದ್ದೇವೆ. ಸುದೀರ್ಘ ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಲಾಯಿತು. ಕಳೆದ ಚುನಾವಣೆ, ಮುಂದಿನ ಯಾವುದೇ ಚುನಾವಣೆ ಬಂದರೂ ಸಮರ್ಥವಾಗಿ ಎದುರಿಸಲು ಸಿದ್ಧರಾಗಿರಬೇಕು ಎಂಬ ಚರ್ಚೆಯಾಗಿದೆ. ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಬೇಡ. ಲೋಕಸಭೆ ಚುನಾವಣೆಯಲ್ಲೂ ನಮಗೆ ಇದರ ಅನುಭವ ಆಗಿದೆ. ರಾಜ್ಯ ಮಟ್ಟದಲ್ಲಿ ನೀವು ಒಂದಾಗಿದ್ದೀರಿ. ಆದರೆ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಆಗಿಲ್ಲ. ಇದೇ ಸೋಲಿಗೆ ಕಾರಣ ಅಂತ ಸೋತವರು ತಿಳಿಸಿದ್ದಾರೆ ಎಂದು ಎಚ್.ಡಿ.ದೇವೇಗೌಡ ಅವರು ಹೇಳಿದರು.

ಪಕ್ಷದ ಮೂವರು ಶಾಸಕರ ಅನರ್ಹತೆ ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಅಭ್ಯರ್ಥಿಗಳನ್ನು ನೀವೇ ನಿರ್ಧಾರ ಮಾಡಿ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಚುನಾವಣೆ 3 ತಿಂಗಳಿಗೆ ಬರುತ್ತೋ 6 ತಿಂಗಳಿಗೆ ಬರುತ್ತೋ ಗೊತ್ತಿಲ್ಲ. ಎಲ್ಲದ್ದಕ್ಕೂ ಸಿದ್ಧರಾಗಿ ಅಂತ ಸಲಹೆ ನೀಡಲಾಗಿದೆ ಎಂದರು.

ಹಳೇ ಮೈಸೂರು ಭಾಗ ಮಾತ್ರ ಅಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆ ಆಗಬೇಕು. ಕುಮಾರಸ್ವಾಮಿ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ಸಂಗ್ರಹ ಮಾಡಬೇಕಿದೆ. ವಿಧಾನಸಭೆ ಚುನಾವಣೆಗೆ ತಳ ಮಟ್ಟದಿಂದ ಪಕ್ಷ ಸಂಘಟನೆ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲು ಮುಖಂಡರು ನನಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಿರಿಯ ನಾಯಕರು ನಾಳೆ ಸಭೆ ಮಾಡುತ್ತಿದ್ದಾರೆ. ಕೋರ್ ಕಮಿಟಿ, ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರ ನೇಮಕಾತಿಯನ್ನು ಆಗಸ್ಟ್ 6, 7ರಂದು ಮಾಡುತ್ತೇವೆ. ಆಗಸ್ಟ್ 7ರಿಂದ 10ರೊಳಗೆ ಜಿಲ್ಲಾ ಸಮಿತಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಶ್ವನಾಥ್, ನಾರಾಯಣ ಗೌಡ, ಗೋಪಾಲಯ್ಯ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದೇವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *