ಪುತ್ರನ ಸರ್ಕಾರ ಬೀಳಿಸಿದವರಿಗೆ ಪಾಠ ಕಲಿಸಲು ಗೌಡ್ರು ರಣತಂತ್ರ

Public TV
2 Min Read

ಬೆಂಗಳೂರು: ಮೈತ್ರಿ ಸರ್ಕಾರ ಪತನಗೊಂಡು ಇಂದಿಗೆ 5 ದಿನವಾದರೂ ಬಿಜೆಪಿ ಹೈಕಮಾಂಡ್ ಸರ್ಕಾರ ನಡೆಸಲು ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶವನ್ನು ನೀಡಿಲ್ಲ. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು ದಿಟ್ಟ ನಡೆಗೆ ಮುಂದಾಗಿದ್ದು, ಅತೃಪ್ತ ಶಾಸಕರ ಪೈಕಿ ಮೂವರನ್ನ ಅನರ್ಹಗೊಳಿಸಿದ್ದಾರೆ. ಇದನ್ನೇ ಅಸ್ತ್ರವಾಗಿ ಉಪಯೋಗಿಸಲು ಸಿದ್ಧತೆ ನಡೆಸಿರುವ ದೋಸ್ತಿ ನಾಯಕರು ಸರ್ಕಾರ ಉರುಳಲು ಕಾರಣವಾದವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಅತೃಪ್ತ ಶಾಸಕರ ಅನರ್ಹತೆಯೊಂದಿಗೆ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರ ನಡೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಎಚ್‍ಡಿಡಿಯ ಬ್ರಹ್ಮಾಸ್ತ್ರ ಸಿದ್ಧವಾಗಿದೆ ಎನ್ನಲಾಗಿದೆ. ಈಗಾಗಲೇ ಸರ್ಕಾರ ಉರುಳಲು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮ್ಯಯ ಅವರೇ ಕಾರಣ ಎಂದು ಕೇಳಿ ಬಂದಿರುವುದರಿಂದ ಸಿದ್ದರಾಮಯ್ಯ ಅವರ ಶಿಷ್ಯರಿಗೆ ಖೆಡ್ಡಾ ತೊಡುವ ಸಿದ್ಧತೆ ನಡೆಸಲಾಗಿದೆ.

ಬಿಜೆಪಿ ಸರ್ಕಾರ ರಚನೆ ಮಾಡುವುದು ನಿಶ್ಚಿತವಾಗಿರುವುದರಿಂದ ವಿಪಕ್ಷ ಸ್ಥಾನ ದೋಸ್ತಿ ಪಾಲಾಗಲಿದ್ದು, ವಿಪಕ್ಷ ಸ್ಥಾನದಿಂದ ಸಿದ್ದರಾಮಯ್ಯರನ್ನ ದೂರ ಇಡಲು ದೇವೇಗೌಡರು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತನಾಡಿ ವಿಪಕ್ಷ ಸ್ಥಾನವನ್ನು ಡಿಕೆ ಶಿವಕುಮಾರ್ ಅಥವಾ ಮತ್ತೊಬ್ಬರಿಗೆ ಕೊಡಿಸುವುದು. ಈ ಮೂಲಕ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಶಕ್ತಿ ಕುಗ್ಗಿಸುವುದು, ಜೆಡಿಎಸ್ ಬೆಂಬಲದ ಜೊತೆ ಡಿ.ಕೆ ಶಿವಕುಮಾರ್ ಗೆ ವಿಪಕ್ಷ ನಾಯಕನ ಸ್ಥಾನ ದೊರೆಯುವಂತೆ ಮಾಡುವುದು. ಮುಂದಿನ ದಿನಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಪರೋಕ್ಷವಾಗಿ ಅವರ ಅಧಿಕಾರಕ್ಕೆ ಕೈ ಹಾಕುವುದು ಮೊದಲ ತಂತ್ರ ಎನ್ನಲಾಗಿದೆ.

ಅತೃಪ್ತರ ಶಾಸಕರಲ್ಲಿ ಮೂವರು ಅನರ್ಹತೆಗೊಂಡಿರುವುದರಿಂದ ಉಳಿದ ಶಾಸಕರ ಮೇಲೆ ಸ್ಪೀಕರ್ ಅವರು ಯಾವ ಕ್ರಮಕೈಗೊಳ್ಳಲಿದ್ದಾರೆ ಎಂಬುದರ ಕಡೆ ಗಮನ ಹರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅತೃಪ್ತ ಬಣದ ರೆಬೆಲ್ ಶಾಸಕರ ಕ್ಷೇತ್ರದ ಹಿಡಿತ ಸಾಧಿಸುವ ಚಿಂತನೆ ನಡೆಸಲಾಗಿದೆ. ಅತೃಪ್ತ ಶಾಸಕರ ರಾಜೀನಾಮೆ ಹಿನ್ನೆಲೆ ಹಾಗೂ ಎಲ್ಲಾ ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಖಚಿತವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನ ಹಾಕಿ ಅತೃಪ್ತರಿಗೆ ಪಾಠ ಕಲಿಸುವುದು. ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಹಾಕಿ ಸೋಲಿಸಿ ಅವರ ರಾಜಕೀಯ ಜೀವನ ಅಂತ್ಯ ಮಾಡಿಸುವುದು ಎರಡನೇ ತಂತ್ರವಾಗಿದೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಎಚ್‍ಡಿಡಿ ಎರಡು ಹಕ್ಕಿ ಹೊಡೆಯುವಲ್ಲಿ ಯಶಸ್ವಿ ಆಗುತ್ತರಾ ಎಂಬುದು ಸದ್ಯದ ಕುತೂಹಲ.

Share This Article
Leave a Comment

Leave a Reply

Your email address will not be published. Required fields are marked *