ನಮ್ಮ ಪಕ್ಷದ ಯಾವುದೇ ಶಾಸಕರು ಓಡಿ ಹೋಗಲ್ಲ- ಎಚ್‍ಡಿಡಿ

Public TV
2 Min Read

ಬೆಂಗಳೂರು: ಜೆಡಿಎಸ್ ಪಕ್ಷದ 20 ಶಾಸಕರು ಪಕ್ಷದಿಂದ ಹೊರ ಬರಲು ಸಿದ್ಧರಾಗಿದ್ದಾರೆ ಎಂಬ ಅನರ್ಹ ಶಾಸಕ ನಾರಾಯಣಗೌಡರ ಹೇಳಿಕೆಗೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ತಿರುಗೇಟು ನೀಡಿದ್ದಾರೆ. ನಮ್ಮ ಪಕ್ಷದ ಯಾವುದೇ ಶಾಸಕರು ಕೂಡ ಓಡಿ ಹೋಗಲ್ಲ ಎಂದು ಎಚ್‍ಡಿಡಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ದೇವೇಗೌಡ ಅವರು, ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗಲ್ಲ. ಕೆಲವು ಸನ್ನಿವೇಶದಲ್ಲಿ ಮಾತನಾಡುವಾಗ ಸ್ವಲ್ಪ ಏರುಪೇರಾದರೆ, ಅದನ್ನೇ ಪ್ರಕಾಶಮಾನವಾಗಿ ಬಿತ್ತರಿಸುತ್ತಾರೆ. ಆದರೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಈ ಬಗ್ಗೆ ಯಾರೂ ಚಿಂತೆ ಮಾಡಬೇಕಾಗಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಜಿಟಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜಿಟಿಡಿ ಅವರು ನಾನು ನನ್ನ ಕ್ಷೇತ್ರದ ಕೆಲಸಕ್ಕಾಗಿ ಓಡಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಅಲ್ಲಿ ಸಾರಾ ಮಹೇಶ್ ಹಾಗೂ ಜಿಟಿ ದೇವೇಗೌಡರ ನಡುವೆ ಸ್ವಲ್ಪ ವ್ಯತ್ಯಾಸ ಇದೆ. ಆದರೆ ಅವರು ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಮೈಸೂರಿನ ಬಗ್ಗೆ ವಿಷಯ ಖಚಿತವಾದ ಮೇಲೆ ಮಾತನಾಡುತ್ತೇನೆ. ಈಗ ಏನೂ ನಾನು ಮಾತನಾಡುವುದಿಲ್ಲ ಎಂದರು.

ರಾಜ್ಯದಲ್ಲಿ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಆದ್ದರಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಕೂಡ ಸಭೆ ಮಾಡಿದ್ದಾರೆ. ಮುಂದಿನ ಅಧಿಯಲ್ಲಿ 4 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿಯೂ ಯಾವಾಗ ಬೇಕಾದರೂ ಚುನಾವಣೆ ಬಂದರು ಎದುರಿಸುತ್ತೇವೆ. ಸದ್ಯ ರಾಜೀನಾಮೆ ನೀಡಿರುವ ಶಾಸಕರ ಬಗ್ಗೆ ಬಿಜೆಪಿ ಹೈಕಮಾಂಡ್ ಯಾವುದೇ ಆಸಕ್ತಿ ತೆಗೆದುಕೊಂಡ ಹಾಗೆ ಕಾಣಿಸುತ್ತಿಲ್ಲ. ಹೀಗಾಗಿ ಯಾವುದೇ ಸಮಯದಲ್ಲಿ ಚುನಾವಣೆ ಬಂದರು ನಾವು ತಯಾರಾಗಬೇಕಿದೆ. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.

ದೇಶದಲ್ಲಿ ಸಿಬಿಐಯನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಅಭಿಪ್ರಾಯವಿದೆ. ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಚಿದಂಬರಂ ಅವರು ಗೃಹ, ಹಣಕಾಸು ಸಚಿವರಾಗಿದ್ದವರು. ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆಂದು ಗೊತ್ತಿದೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು, ಕಾಂಗ್ರೆಸ್ ಪಕ್ಷವನ್ನು ಕೇಂದ್ರ ತುಳಿಯಲು ಪ್ರಯತ್ನಿಸಲಾಗುತ್ತಿದೆ ಎಂದರು. ಅಲ್ಲದೇ ಡಿಕೆ ಶಿವಕುಮಾರ್ ಪರ ಒಕ್ಕಲಿಗ ಸಮುದಾಯ ನಡೆಸಿದ ಪ್ರತಿಭಟನೆಯಲ್ಲಿ ಗೈರಾಗಿರುವ ಬಗ್ಗೆ ಯಾವುದೇ ಬೇರೆ ಅರ್ಥ ಕಲ್ಪಿಸುವುದು ಬೇಡ. ವಿಚಾರಣೆಗೆ ದೆಹಲಿಗೆ ತೆರಳುವ ಮುನ್ನ ಡಿಕೆ ಶಿವಕುಮಾರ್ ನನ್ನ ಮನೆಗೆ ಬಂದಿದ್ದರು. ಅವರಿಗೆ ಧೈರ್ಯ ಹೇಳಿ ಕಳಿಸಿಕೊಟ್ಟಿದ್ದೆ. ನಾನು ಮಾಜಿ ಪ್ರಧಾನಿಯಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲಾಗಲ್ಲ, ನನ್ನ ಪಕ್ಷದ ಶಾಸಕರು, ಮುಖಂಡರು ಕಾರ್ಯಕರ್ತರನ್ನು ಕಳಿಸುವುದಾಗಿ ಪ್ರತಿಭಟನೆ ನೇತೃತ್ವ ವಹಿಸಿದವರಿಗೆ ತಿಳಿಸಿದ್ದೆ. ಅದರಂತೆ ನಮ್ಮ ಪಕ್ಷದ ಮುಖಂಡರು ಭಾಗವಹಿಸಿದ್ದರು ಎಂದರು.

Share This Article
Leave a Comment

Leave a Reply

Your email address will not be published. Required fields are marked *